ಸಮುದ್ರ ಮಧ್ಯೆ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಿದ ನೌಕಾದಳ
ಕಾಪು: ಕಾಪು ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಅಪಾಯಕಾರಿಯಾಗಿ ನಿಂತಿರುವ “ಕೋರಮಂಡಲ್ ಎಕ್ಸ್ ಪ್ರೆಸ್ ಟಗ್’ ರಕ್ಷಣೆಗೆ ನೌಕಾದಳ ಕಾರ್ಯಾಚರಣೆ ನಡೆಸಿದ್ದು, ಬೋಟ್ ನಲ್ಲಿದ್ದ 9 ಮಂದಿಯನ್ನೂ ರಕ್ಷಿಸಲಾಗಿದೆ.
ಟಗ್ ರಕ್ಷಣೆಗೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿ ಪರಿಣಮಿಸಿತ್ತು. ರವಿವಾರವೂ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಸರಕಾರದ ಸೂಚನೆಯಂತೆ ಕೊಚ್ಚಿಯಿಂದ ನೌಕಾದಳದ ಹೆಲಿಕಾಪ್ಟರ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.
ಮೊದಲ ಹಂತದಲ್ಲಿ ಐವರನ್ನು ಹಾಗೂ ಬಳಿಕ 4ರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ತೌಕ್ತೆ ಚಂಡಮಾರುತದ ಅಲೆಗಳ ಅಬ್ಬರಕ್ಕೆ ಟಗ್ ನ ಆಯಂಕರ್ ತುಂಡಾಗಿತ್ತಲ್ಲದೇ ಎಂಜಿನ್ ಗೆ ನೀರುನುಗ್ಗಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಶುಕ್ರವಾರ ಬೆಳಗ್ಗೆ ಸಮುದ್ರದಲ್ಲಿ ತೇಲುತ್ತಿದ್ದ ಟಗ್, ಶನಿವಾರ ಬೆಳಗ್ಗೆ 8:30ಕ್ಕೆ ಕಾಪು ಲೈಟ್ ಹೌಸ್ ನಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಬಂಡೆಗೆ ಡಿಕ್ಕಿ ಹೊಡೆದು ಸಿಲುಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.