ಸಿಎಂ ಯಡಿಯೂರಪ್ಪಗೂ ತಟ್ಟಿದ “ನನ್ನನ್ನೂ ಬಂಧಿಸಿ” ಅಭಿಯಾನ | ಸಿಎಂ ನಿವಾಸ ಬಳಿಯೇ ಪೋಸ್ಟರ್ ಪತ್ತೆ
ಬೆಂಗಳೂರು: ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂಬ ಪೋಸ್ಟರ್ ದೆಹಲಿಯ ಗೋಡೆಗಳಲ್ಲಿ ಹಾಕಿದವರನ್ನು ಬಂಧಿಸಿದ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಆಕ್ರೋಶದ ಬಿಸಿ ಕರ್ನಾಟಕ ಸಿಎಂ ಯಡಿಯೂರಪ್ಪನವರಿಗೂ ತಟ್ಟಿದೆ.
ಹೌದು..! ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದವರನ್ನು ಬಂಧಿಸಿದ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧಿಸಿ ಟ್ವೀಟ್ ಮಾಡಿ, ಮೋದಿ ಜೀ ನಮ್ಮನ್ನೂ ಬಂಧಿಸಿ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ದೇಶಾದ್ಯಂತ ಇದು ಅಭಿಯಾನವಾಗಿ ಪರಿಣಮಿಸಿದ್ದು, “ಮೋದಿ ಜೀ ನಮ್ಮನ್ನು ಬಂಧಿಸಿ” ಎಂಬ ಪೋಸ್ಟರ್ ಎಲ್ಲೆಡೆ ರಾರಾಜಿಸುತ್ತಿವೆ. ಈ ನಡುವೆ ಕರ್ನಾಟಕ ಸಿಎಂ ಯಡಿಯೂರಪ್ಪನವರ ನಿವಾಸದ ಬಳಿಯಲ್ಲಿಯೂ ಪೋಸ್ಟರ್ ಅಂಟಿಸಲಾಗಿದೆ.
ಸಿಎಂ ನಿವಾಸ ಕಾವೇರಿಯ ಸಮೀಪದಲ್ಲಿಯೇ ರಾತ್ರೋ ರಾತ್ರಿ ಗೋಡೆಗಳ ಮೇಲೆ ಹಾಗೂ ಬ್ಯಾರಿಕೇಡ್ ಗಳ ಮೇಲೆ ಪೋಸ್ಟರ್ ಗಳನ್ನು ಅಂಟಿಸಲಾಗಿದ್ದು, ಭಾರತದ ಜನರ ಪ್ರಾಣ ಉಳಿಸಬಲ್ಲ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡಿದ್ದೇಕೆ? “ನನ್ನನ್ನೂ ಬಂಧಿಸಿ ಮೋದಿ ಜೀ“ (ಅರೆಸ್ಟ್ ಟೂ ಮೀ) ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.