ಗಂಗಾ ನದಿಯಲ್ಲಿ ತೇಲಿ ಬಂದ ಶವಗಳಿಗೆ ಪೆಟ್ರೋಲ್ ಮತ್ತು ಟೈರ್ ಹಾಕಿ ಅಂತ್ಯಸಂಸ್ಕಾರ | ಐವರು ಪೊಲೀಸರ ಅಮಾನತು
ಬಲ್ಲಿಯಾ: ಗಂಗಾ ನದಿಯಿಂದ ತೇಲಿಬಂದ ಶವಗಳಿಗೆ ಪೆಟ್ರೋಲ್ ಮತ್ತು ಟೈರ್ ಹಾಕಿ ಸುಟ್ಟ ಐವರು ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಅಮಾನತು ಮಾಡಲಾಗಿದ್ದು, ಈ ಸಂಬಂಧಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆದ ಬಳಿಕ ಕಾನ್ ಸ್ಟೇಬಲ್ ಗಳನ್ನು ಅಮಾನತು ಮಾಡಲಾಗಿದೆ.
ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋದಲ್ಲಿ ಕಂಡು ಬಂದ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಂತ್ಯಸಂಸ್ಕಾರ ಎನ್ನುವುದು ಒಂದು ಸೂಕ್ಷ್ಮ ವಿಚಾರವಾಗಿದ್ದು, ಪೊಲೀಸರು ಇದನ್ನು ನಿರ್ಲಕ್ಷಿಸಿದ್ದಾರೆ ಎಂದು ಎಸ್ ಪಿ ವಿಪಿನ್ ಟಾಡಾ ಹೇಳಿದ್ದಾರೆ.
ಮೇ 15ರಂದು ಗಂಗಾ ನದಿಯಲ್ಲಿ ತೇಲಿ ಬರುವ ಶವಗಳನ್ನು ಬದಿಗೆಳೆದು, ಶವದ ಮೇಲೆ ಟೈರ್ ಇಟ್ಟು ಪೆಟ್ರೋಲ್ ಸುರಿದು ಪೊಲೀಸರು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ಸಾವಿನ ಬಳಿಕವೂ ಮೃತದೇಹಕ್ಕೆ ಒಂದು ಘನತೆ ಇದೆ. ಬೇಕಾ ಬಿಟ್ಟಿಯಾಗಿ ಅಂತ್ಯಸಂಸ್ಕಾರವನ್ನು ನೆರವೇರಿಸುವಂತಿಲ್ಲ.ಅದು ಅಮಾನವೀಯ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಆದರೆ ವಿಪರ್ಯಾಸ ಏನೆಂದರೆ, ಮೃತದೇಹಗಳನ್ನು ನದಿಗಳಿಗೆ ಎಸೆಯುತ್ತಿರುವವರಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಸರ್ಕಾರದ ವೈಫಲ್ಯವೂ ಇದಾಗಿದೆ.