6 ಕೋಟಿ ಕನ್ನಡಿಗರಿಗೆ 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ | ಯಾರಿಗೆ ಏನೇನು ಸಿಗಲಿದೆ?
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಾಕ್ ಡೌನ್ ನಿಂದ ಜನತೆ ಸಂಕಷ್ಟಕ್ಕೀಡಾಗಿದ್ದು, ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ 1,250 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಪ್ರತಿ ಹೆಕ್ಟೇರ್ ಹೂವು ಹಾನಿಗೆ 10 ಸಾವಿರ ರೂಪಾಯಿ ಪರಿಹಾರ ಧನ, ರಾಜ್ಯದ ರೈತರಿಗೆ 12.73 ಕೋಟಿ ರೂಪಾಯಿ ಮೌಲ್ಯದಲ್ಲಿ ನೆರವು ನೀಡಲಿದ್ದೇವೆ, ಆಟೋ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ ರೂಪಾಯಿ ನೀಡಲಾಗುತ್ತದೆ. ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂಪಾಯಿ ನೀಡಲಿದ್ದೇವೆ. ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂಪಾಯಿ ಪರಿಹಾರ ಸಿಗಲಿದೆ.ರಸ್ತೆ ಬದಿ ವ್ಯಾಪಾರಿಗಳಿಗೂ ತಲಾ 2 ಸಾವಿರ ರೂಪಾಯಿ ಪರಿಹಾರ ನೀಡಲಿದ್ದೇವೆ ಎಂದು ತಿಳಿಸಿದರು.
ಸಹಕಾರಿ ಸಂಘಗಳಿಂದ ಸಾಲ ಪಡೆದವರು ಕಂತು ಪಾವತಿಸುವ ಅವಧಿಯನ್ನ ಜುಲೈ 30ರವರೆಗೂ ಮುಂದೂಡಲಾಗಿದೆ. ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಆಹಾರ ಸಿಗಲಿದೆ. ಕೊರೊನಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ಕಲಾವಿದರು ಹಾಗೂ ಕಲಾ ತಂಡದವರಿಗೆ ತಲಾ 3 ಸಾವಿರ ರೂಪಾಯಿ ಪರಿಹಾರ ಧನವನ್ನ ನೀಡಲಾಗುವುದು ಎಂದು ಹೇಳಿದರು.
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಎಪಿಎಲ್ ಕಾರ್ಡ್ದಾರರಿಗೆ 15 ರೂಪಾಯಿಯಂತೆ ಐದು ಕೆಜಿ ಅಕ್ಕಿ ಸಿಗಲಿದೆ. ಅಲ್ಲದೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಉಚಿತ ಪಡಿತರ ಸಿಗಲಿದೆ. ಗ್ಯಾಸ್ ವಿತರಕರು, ಕೆಇಬಿ ಲೈನ್ ಮ್ಯಾನ್ ಹಾಗೂ ಶಿಕ್ಷಕರಿಗೆ ಆದ್ಯತೆಯ ಮೇರೆ ಕೊರೊನಾ ಲಸಿಕೆ ಸಿಗಲಿದೆ. ಗ್ರಾಮೀಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಎನ್ ಡಿಆರ್ ಎಫ್ ನಿಧಿಯನ್ನು ಬಳಕೆ ಮಾಡಬಹುದು ಎಂದು ಹೇಳಿದರು.