ತಾಳಿ ಕಟ್ಟುವ ಶುಭ ವೇಳೆ… ಮಾಂಗಲ್ಯ ಸರ ಎಗರಿಸಿದ ಅರ್ಚಕ! - Mahanayaka
8:26 PM Wednesday 11 - December 2024

ತಾಳಿ ಕಟ್ಟುವ ಶುಭ ವೇಳೆ… ಮಾಂಗಲ್ಯ ಸರ ಎಗರಿಸಿದ ಅರ್ಚಕ!

telangana
20/05/2021

ತೆಲಂಗಾಣ: ನೇರ ರಿಜಿಸ್ಟರ್ ಆಫೀಸ್ ಗೆ ಹೋಗಿ ಮದುವೆಯಾದರೂ ಮದುವೆಯಾಗುತ್ತದೆ. ಆದರೆ ಜನರು ಅರ್ಚಕರ ಕೈಯಿಂದ ಮಂತ್ರ ಹೇಳಿಸಿಕೊಂಡು ಮದುವೆಯಾದರೆ, ಜೀವನ ಸುಖಕರವಾಗಿರುತ್ತದೆ ಎನ್ನುವ ನಂಬಿಕೆಯಿಂದ ಅರ್ಚಕರನ್ನು ಕರೆಸಿ ವಿವಾಹವಾಗುತ್ತಾರೆ. ಆದರೆ, ಇಲ್ಲೊಬ್ಬ ಅರ್ಚಕ ಮಾಡಿರುವ ಕೆಲಸದಿಂದಾಗಿ ಜನರು ಅರ್ಚಕರ ಮೇಲೆಯೇ ಅನುಮಾನ ಪಡುವಂತಹ ಸಂದರ್ಭ ಸೃಷ್ಟಿಯಾಗಿದೆ.

ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಅರ್ಚಕನೋರ್ವ ಮದುವೆ ಕಾರ್ಯ ನೆರವೇರಿಸಲು ಆಗಮಿಸಿದ್ದಾನೆ. ಮಂತ್ರ ಹೇಳುತ್ತಿರುವ ಸಂದರ್ಭದಲ್ಲಿ ಕೈ ಚಳಕ ತೋರಿಸಿದ್ದು, ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿ,  ನಕಲಿ ಮಾಂಗಲ್ಯ ಸರವನ್ನು ವರನಿಂದ ಕಟ್ಟಿಸಿದ್ದಾನೆ.

ಮದುವೆಯ ಸಂಭ್ರಮದ ನಡುವೆ ಅರ್ಚಕನನ್ನಾಗಲಿ, ಮಾಂಗಲ್ಯವನ್ನಾಗಲಿ ಯಾರೂ ಗಮನಿಸಿರಲಿಲ್ಲ. ಆದರೆ, ಇಷ್ಟೆಲ್ಲ ಪ್ಲಾನ್ ಮಾಡಿದ್ದ ಅರ್ಚಕ ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾಗಿ ಇದೀಗ ಸಿಕ್ಕಿ ಬಿದ್ದಿದ್ದಾನೆ.

ಮೇ 16ರಂದು ತೆಲಂಗಾಣದಲ್ಲಿ ವಿವಾಹ ನಡೆದಿತ್ತು. ವಿವಾಹದ ಬಳಿಕ ಚಿನ್ನದ ಮಾಂಗಲ್ಯ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಆದರೆ ಅರ್ಚಕನ ಮೇಲೆ ವಿಪರೀತವಾಗಿ ನಂಬಿಕೆ ಇಟ್ಟಿದ್ದ ಕುಟುಂಬಸ್ಥರು ಆತನನ್ನು ಅನುಮಾನಿಸಲು ಹೋಗಿರಲಿಲ್ಲ. ಮಾಂಗಲ್ಯ ಸರ ಹೇಗೆ ಬದಲಾಯಿತು ಎಂದು ನೋಡಲು ಮದುವೆಯ ವಿಡಿಯೋವನ್ನು ನೋಡುತ್ತಿದ್ದ ವೇಳೆ, ತಾಳಿ ಕಟ್ಟಿಸುವುದಕ್ಕಿಂತ ಮೊದಲೇ ಅರ್ಚಕ ಮಾಂಗಲ್ಯ ಸರವನ್ನು ಎಗರಿಸಿ, ತನ್ನ ಎದೆಯ ಭಾಗದಲ್ಲಿರುವ ವಸ್ತ್ರದಲ್ಲಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ.

ಮದುವೆ ಎಂದರೆ, ಇಬ್ಬರ ಜೀವನದ ಪ್ರಶ್ನೆ. ಈ ಸುಂದರ ಸಂದರ್ಭ ಎಲ್ಲರ ಜೀವನದಲ್ಲಿ ಸಿಹಿಯಾಗಿಯೇ ಉಳಿಯುತ್ತದೆ. ಆದರೆ ಈ ಅರ್ಚಕ ಮಾಡಿರುವ ಕೆಲಸದಿಂದಾಗಿ, ಅರ್ಚಕರನ್ನು ಕೂಡ ಜನರು ಅನುಮಾನದಿಂದ ನೋಡುವಂತಾಗಿದೆ.

ಇತ್ತೀಚಿನ ಸುದ್ದಿ