ಬಿಜೆಪಿಯವರಿಗೆ ಜನ ಕಲ್ಲು ಹೊಡೆಯುವ ಪರಿಸ್ಥಿತಿ ಬರಬಹುದು | ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ: ‘ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಕೊರೊನಾ ನಿಯಂತ್ರಣ ಹಾಗೂ ಪ್ಯಾಕೇಜ್ ಘೋಷಣೆ ವಿಷಯದಲ್ಲಿ ಸಂಪೂರ್ಣವಾಗಿ ಎಡವಿದೆ. ಇದೇ ರೀತಿ ಮುಂದುವರಿದರೆ ಅವರಿಗೆ ಜನರು ಬೀದಿ ಬೀದಿಯಲ್ಲಿ ಕಲ್ಲು ಹೊಡೆಯುವ ಪರಿಸ್ಥಿತಿ ಬರಲಿದೆ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿಕೆ ನೀಡಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಂಡು ಬಂದ ಬಿಜೆಪಿಗೆ ಡಬಲ್ ಎಂಜಿನ್ ಅರ್ಥ ಏನು ಎಂದು ಕೇಳಬೇಕಾಗಿದೆ. ಆತ್ಮನಿರ್ಭರದ ಬಗ್ಗೆ ಮಾತನಾಡುತ್ತಿದ್ದವರು ಈಗ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಗಂಗಾನದಿ ಸ್ವಚ್ಛ ಮಾಡುತ್ತೇವೆ ಎಂದಿದ್ದರು. ಈಗ ಅಲ್ಲಿ ಶವಗಳು ತೇಲುತ್ತಿವೆ. ಎಲ್ಲಿದೆ ಇವರ ಧರ್ಮ, ಇವರ ಸಂಸ್ಕೃತಿ? ನಾಚಿಕೆ ಆಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಸಂಸದರು ಏನು ಮಾಡುತ್ತಿದ್ದಾರೆ? ಚಂಡಮಾರುತದಿಂದ ಆದ ಹಾನಿ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದರು. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ಆರಂಭದಿಂದಲೂ ನಮಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ನೆರೆಯಾದಾಗಲೂ ಹಣ ಕೊಡಲಿಲ್ಲ. ಕೋವಿಡ್ ನಿಯಂತ್ರಣಕ್ಕೂ ನೀಡಲಿಲ್ಲ. ಆಮ್ಲಜನಕವನ್ನೂ ಕೊಡಲಿಲ್ಲ. ಎಲ್ಲವನ್ನೂ ಹೈಕೋರ್ಟ್ ಆದೇಶಿಸುವಂತಹ ಸ್ಥಿತಿ ಇದೆ. ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಆಮ್ಲಜನಕ ಬರುತ್ತಿದೆ ಇದೆಂತಹ ಡಬಲ್ ಎಂಜಿನ್ ಸರ್ಕಾರ?’ ಎಂದು ಕೇಳಿದರು.
‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರೂಪ್ಪ ಅವರ ಬಗ್ಗೆ ಬಹಳ ಗೌರವವಿತ್ತು. ಅವರ ಆಡಳಿತ ವೈಖರಿ ನೋಡಿದರೆ ಬೇಸರವಾಗುತ್ತಿದೆ. ಪ್ರಧಾನಿ ಮೆಚ್ಚಿಸಲು ಸೋಂಕಿತರ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ. ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದ್ದಾರೆ. ಕೂಡಲೇ ಮನೆ ಮನೆಗೆ ಹೋಗಿ ಪರೀಕ್ಷೆ ಮಾಡಬೇಕು. ಇಲ್ಲವಾದಲ್ಲಿ ಹಳ್ಳಿಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.