ಯುವಕನ ಮೊಬೈಲ್ ನ್ನು ಒಡೆದು ಹಾಕಿ ಕಪಾಳಕ್ಕೆ ಬಾರಿಸಿದ ಡಿಸಿಯ ಸ್ಥಿತಿ ಏನಾಗಿದೆ ಗೊತ್ತಾ?
ರಾಯ್ಪುರ್: ಕೊರೊನಾ ನಿಯಮ ಉಲ್ಲಂಘಿಸಿದ ಎಂದು ಆರೋಪಿಸಿ ಯುವಕನೋರ್ವನ ಮೊಬೈಲ್ ನ್ನು ನೆಲಕ್ಕೆ ಒಡೆದು, ತನ್ನ ಸಿಬ್ಬಂದಿಯಿಂದ ಥಳಿಸಿದ ಛತ್ತೀಸ್ ಗಢದ ಸೂರಜ್ ಪುರದ ಜಿಲ್ಲಾಧಿಕಾರಿ ರಣಬೀರ್ ಶರ್ಮಾನನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.
ಲಾಕ್ ಡೌನ್ ಸಂದರ್ಭ ಯುವಕನೋರ್ವ ಔಷಧಿ ತರಲು ಆಗಮಿಸಿದ್ದು, ಈ ವೇಳೆ ಜಿಲ್ಲಾಧಿಕಾರಿ ಯುವಕನನ್ನು ತಡೆದಿದ್ದು, ಸಿನಿಮಾ ಸ್ಟೈಲ್ ನಲ್ಲಿ ಯುವಕನ ಮೊಬೈಲ್ ನ್ನು ಕಿತ್ತುಕೊಂಡು ನೆಲಕ್ಕೆ ಬಡಿದು, ಯುವಕನ ಕಪಾಳಕ್ಕೆ ಬಾರಿಸಿದ್ದ ಬಳಿಕ ತನ್ನ ಸಿಬ್ಬಂದಿಗೆ ಯುವಕನಿಗೆ ಥಳಿಸುವಂತೆ ಆದೇಶ ನೀಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಘಟನೆಯ ಬೆನ್ನಲ್ಲೇ ಆತನನ್ನು ಜಿಲ್ಲಾಧಿಕಾರಿ ಸ್ಥಾನದಿಂದ ವಜಾ ಮಾಡಲಾಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ, ಛತ್ತೀಸಘಡ ಸಿಎಂ ಭೂಪೇಶ್ ಬಘೇಲ್ ಅವರು ಈ ಘಟನೆಯನ್ನು ಖಂಡಿಸಿ, ಈ ರೀತಿಯ ವರ್ತನೆಗಳನ್ನು ರಾಜ್ಯದಲ್ಲಿ ಸಹಿಸಿಕೊಳ್ಳುವುದಿಲ್ಲ. ಸಂಬಂಧಿತ ಅಧಿಕಾರಿಯನ್ನು ಕೂಡಲೇ ಅವರ ಹುದ್ದೆಯಿಂದ ತೆಗೆಯಲಾಗುವುದು ಎಂದು ಟ್ವೀಟ್ ಮಾಡಿದ್ದರು. ಹೇಳಿಕೆಯ ಬೆನ್ನಲ್ಲೇ ಈತನ ಸ್ಥಾನಕ್ಕೆ ಮತ್ತೋರ್ವ ಐಎಎಸ್ ಅಧಿಕಾರಿ ಗೌರವ್ ಕುಮಾರ್ ಸಿಂಗ್ ಅವರನ್ನು ನೇಮಿಸಿ ಸಿಎಂ ಭೂಪೇಶ್ ಬಘೇಲ್ ಆದೇಶ ನೀಡಿದ್ದಾರೆ.