ನಮ್ಮ ಸರ್ಕಾರದ 7 ವರ್ಷಗಳ ಅವಧಿಯಲ್ಲಿ ಭಾರತ ಹೆಮ್ಮೆಯ ಕ್ಷಣಗಳನ್ನು ಅನುಭವಿಸಿದೆ | ಪ್ರಧಾನಿ ಮೋದಿ
ನವದೆಹಲಿ: ನಮ್ಮ ಸರ್ಕಾರದ ಅವಧಿಯಲ್ಲಿ ದೇಶ ಹಲವಾರು ಹೆಮ್ಮೆಯ ಕ್ಷಣಗಳನ್ನು ಅನುಭವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ತಮ್ಮ ನೇತೃತ್ವದ ಸರ್ಕಾರದ ಏಳನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಂಡರು.
‘ಮನ್ ಕಿ ಬಾತ್’ ನಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ದೇಶದಲ್ಲಿ ಸಾಕಷ್ಟು ಯಶಸ್ಸಿನ ಪ್ರಯೋಗಗಳೂ ನಡೆದಿವೆ. ಜತೆಗೆ ಸಾಂಕ್ರಾಮಿಕ ಪಿಡುಗು ದೇಶದ ಜನರ ಜೀವನಕ್ಕೆ ತೀವ್ರ ಹಾನಿ ಮಾಡಿ, ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. ಭಾರತವು ಈ ಪಿಡುಗಿನ ವಿರುದ್ಧ ಮೇಲುಗೈ ಸಾಧಿಸುತ್ತದೆ ಎಂದು ಅವರು ಹೇಳಿದರು.
ಈ ಏಳು ವರ್ಷಗಳ ಅವಧಿಯಲ್ಲಿ ಭಾರತವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎಂಬ ಮಂತ್ರಗಳನ್ನು ಅನುಸರಿಸಿಯೇ ನಡೆದಿದೆ. ಭಾರತ ತನ್ನದೇ ಆದ ನಂಬಿಕೆಗಳೊಂದಿಗೆ ಜಗತ್ತಿಗೇ ಹೆಮ್ಮೆ ತರುತ್ತಿದೆ. ನಮ್ಮ ವಿರುದ್ಧ ಪಿತೂರಿ ಮಾಡುವವರಿಗೆ ಭಾರತ ಸೂಕ್ತ ಉತ್ತರ ನೀಡುತ್ತದೆ ಎಂಬುದಕ್ಕೆ ನಾವು ಸಾಕ್ಷಿಯಾದಾಗ, ನಮ್ಮ ವಿಶ್ವಾಸ ಹೆಚ್ಚುತ್ತದೆ. ಹಾಗೆಯೇ ರಾಷ್ಟ್ರೀಯ ಭದ್ರತೆ ವಿಷಯಗಳಲ್ಲಿ ಭಾರತ ರಾಜಿ ಮಾಡಿಕೊಳ್ಳದಿದ್ದಾಗ, ನಮ್ಮ ಸಶಸ್ತ್ರ ಪಡೆಗಳ ಬಲ ಹೆಚ್ಚಾಗುತ್ತದೆ. ಆಗ ನಮಗೆ ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಅನಿಸುತ್ತದೆ ಎಂದು ಅವರು ಹೇಳಿದರು.
ದೇಶದ ಹಲವು ಹಳೆಯ ವಿವಾದಗಳು ಶಾಂತಿ ಮತ್ತು ಸೌಹಾರ್ದದಿಂದ ಪೂರ್ಣವಾಗಿ ಬಗೆಹರಿದಿವೆ. ಈಶಾನ್ಯ ಭಾರತದಿಂದ ಕಾಶ್ಮೀರದವರೆಗೂ ಶಾಂತಿ ಮತ್ತು ಅಭಿವೃದ್ಧಿಯು ಹೊಸ ವಿಶ್ವಾಸವನ್ನು ಹುಟ್ಟುಹಾಕಿದೆ. ಸ್ವಾತಂತ್ರ್ಯದ ನಂತರದ ಏಳು ದಶಕಗಳಲ್ಲಿ ಕೇವಲ 3.5 ಕೋಟಿ ಗ್ರಾಮೀಣ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು. ಕಳೆದ 21 ತಿಂಗಳಲ್ಲಿ 4.5 ಕೋಟಿ ಗ್ರಾಮೀಣ ಮನೆಗಳಿಗೆ ಶುದ್ಧ ನೀರಿನ ಸಂಪರ್ಕ ನೀಡಲಾಗಿದೆ. ಬಡವರಿಗೆ ಉಚಿತ ಚಿಕಿತ್ಸೆ ಒದಗಿಸಲು ‘ಆಯುಷ್ಮಾನ್ ಯೋಜನೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳಿಗೆ ಮನೆ ನಿರ್ಮಿಸಿಕೊಂಡ ಹಲವು ಫಲಾನುಭವಿಗಳು ತಮ್ಮ ಮನೆ ಗೃಹ ಪ್ರವೇಶಕ್ಕೆ ಆಹ್ವಾನ ಪತ್ರಿಕೆಗಳನ್ನು ನನಗೆ ಕಳುಹಿಸುತ್ತಿದ್ದಾರೆ ಎಂದು ಅವರು ನೆನಪಿಸಿಕೊಂಡರು. ಈ ಏಳು ವರ್ಷಗಳ ಅವಧಿಯಲ್ಲಿ ಭಾರತವು ವಿಶ್ವಕ್ಕೆ ಡಿಜಿಟಲ್ ವಹಿವಾಟಿನ ಹೊಸ ದಿಕ್ಕನ್ನು ತೋರಿಸಿದೆ. ಅಲ್ಲದೆ ಹಲವು ಉಪಗ್ರಹಗಳನ್ನು ಉಡಾಯಿಸಿದೆ. ಹೊಸ ರಸ್ತೆಗಳನ್ನು ನಿರ್ಮಿಸಿ ದಾಖಲೆಗಳನ್ನು ಬರೆದಿದೆ ಎಂದರು.