ಚೀನಾ ಪ್ರಯೋಗಾಲಯದಿಂದಲೇ ಕೊವಿಡ್ 19 ಸೋರಿಕೆ: ಗುಪ್ತಚರ ವರದಿ
ಲಂಡನ್: ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಕೊರೋನಾ ವೈರಸ್ ಚೀನಾದ ಬಯೋ ಪ್ರಯೋಗಾಲಯದಿಂದಲೇ ಸೋರಿಕೆಯಾಗಿರುವುದರ ಸಾಧ್ಯತೆ ಇದೆ ಎಂದು ಬ್ರಿಟನ್ ಕೂಡ ಅನುಮಾನ ವ್ಯಕ್ತಪಡಿಸಿದೆ.
ಬ್ರಿಟನ್ ನ ಗುಪ್ತಚರ ಏಜೆನ್ಸಿಗಳು ಇತ್ತೀಚೆಗೆ ಈ ಹೇಳಿಕೆ ನೀಡಿವೆ. ಈ ನಡುವೆ ಬ್ರಿಟನ್ ನ ಲಸಿಕೆ ಸಚಿವ ನಧೀಮ್ ಝಹಾವಿ ಮಾರಕ ವೈರಾಣುವಿನ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಸಂಪೂರ್ಣ ತನಿಖೆ ನಡೆಸಬೇಕೆಂದು ಹೇಳಿದೆ.
ಕೋವಿಡ್-19 ಮೂಲ ವಿಸ್ತೃತ ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದ್ದು, ಪ್ರಯೋಗಾಲಯದಿಂದಲೇ ಈ ಮಾರಕ ವೈರಾಣು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ರಾಜಕಾರಣಿಗಳು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾಂಕ್ರಾಮಿಕ ಪ್ರಾರಂಭದ ದಿನಗಳಲ್ಲಿ ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಕೊರೋನಾ ವೈರಸ್ ಪ್ರಯೋಗಾಲಯದಿಂದ ಸೋರಿಕೆಯಾಗಿರುವ ಸಾಧ್ಯತೆಗಳು ಕ್ಷೀಣ ಎಂದು ಹೇಳಿ, ಬಾವಲಿಗಳ ಮೂಲಕ ಕೊರೋನಾ ಹರಡಿರುವ ಜಾಡನ್ನು ಹಿಡಿದು ಸಂಶೋಧನೆ ನಡೆಸಿತ್ತು.ಆದರೆ ಈಗ ಅದೇ ಗುಪ್ತಚರ ಸಂಸ್ಥೆಗಳು ಪ್ರಯೋಗಾಲಯದಿಂದಲೇ ಕೊರೋನಾ ವೈರಾಣು ಹರಡಿರುವ ಸಾಧ್ಯತೆಗಳಿವೆ ಎಂದು ಹೇಳುತ್ತಿರುವುದನ್ನು ಸಂಡೇ ಟೈಮ್ಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ.