“ಸೆಂಟ್ರಲ್ ಮಾರ್ಕೆಟ್ ಕಟ್ಟಡ ನೆಲಸಮಗೊಳಿಸಿದ ಮನಪಾ ನಿರ್ಧಾರ ಅಕ್ಷಮ್ಯ ಅಪರಾಧ*”
ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಯಾವುದೇ ಒಂದು ಮುನ್ಸೂಚನೆ ನೀಡದೆ ಏಕಾಏಕಿ ಪೋಲಿಸ್ ಬಲಪ್ರಯೋಗದಿಂದ ಮಾಧ್ಯಮದವರನ್ನು ಕೂಡ ಹತ್ತಿರಕ್ಕೆ ಸುಳಿಯಲು ಬಿಡದೆ ನೆಲಸಮ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ.
ಕಳೆದ ವರ್ಷವೇ ಕೊರೋನಾದ ನೆಪದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ನಗರದ ಹೃದಯಭಾಗದಲ್ಲಿದ್ದ ಸೆಂಟ್ರಲ್ ಮಾರ್ಕೆಟ್ ನ ವ್ಯಾಪಾರವನ್ನು ವ್ಯಾಪಾರಸ್ಥರ ಬಳಿ ಯಾವುದೇ ರೀತಿಯಲ್ಲಿ ಚರ್ಚಿಸದೆ, ಬೈಕಂಪಾಡಿ APMC ಯಾರ್ಡಿಗೆ ಸ್ಥಳಾಂತರಿಸಲಾಯಿತು. ವ್ಯಾಪಾರಸ್ಥರ ಪ್ರಬಲ ವಿರೋಧದ ಮಧ್ಯೆಯೂ ಕೋರೋನಾದ ಸಂಕಷ್ಟದ ಕಾಲಘಟ್ಟದಲ್ಲಿ ಜಿಲ್ಲಾಡಳಿತದ ನಿರ್ಧಾರಕ್ಕೆ ಸಹಕರಿಸಲಾಯಿತು.ಕ್ರಮೇಣ ಲಾಕ್ ಡೌನ್ ತೆರವು ಪ್ರಕ್ರಿಯೆ ನಡೆದಾಗ ಮತ್ತೆ ನಗರದ ಹ್ರದಯ ಭಾಗದಲ್ಲೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಡಳಿತ ಹಾಗೂ ಮನಪಾದ ಬಳಿ ವಿನಂತಿಸಿದಾಗ ಅವರ ನಿಜಬಣ್ಣ ಬಯಲಾಯಿತು. 50 ವರ್ಷಗಳ ಇತಿಹಾಸವಿರುವ ಮಾರ್ಕೆಟ್ ನ ಕಟ್ಟಡವನ್ನು ಇದೇ ಸಂಧರ್ಭವನ್ನು ಬಳಸಿ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂದು ಗುಲ್ಲೆಬ್ಬಿಸಿ ಸೆಂಟ್ರಲ್ ಮಾರ್ಕೆಟ್ ನ್ನು ಇಲ್ಲವಾಗಿಸಿ, ವ್ಯಾಪಾರಸ್ಥರ ಬದುಕನ್ನೇ ಸರ್ವನಾಶ ಮಾಡಲು ಕುತಂತ್ರ ಹೆಣೆಯಿತು.ನೂರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸ ಕಟ್ಟಡವನ್ನು ಮೂರು ವರ್ಷಗಳ ಅವಧಿಯಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಯಿತು.
ಪರ್ಯಾಯ ವ್ಯವಸ್ಥೆ ಮಾಡಿ ಮುಂದಿನ ಯೋಜನೆಗೆ ನಾಂದಿ ಹಾಡಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿದಾಗ ಬೈಕಂಪಾಡಿಯ APMC ಸಭಾಂಗಣದಲ್ಲಿ ಸಂಸದ ನಳೀನ್ ಕುಮಾರ್ ಕಟೀಲುರವರ ಅಧ್ಯಕ್ಷತೆಯಲ್ಲಿ, ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರ ಸಮಕ್ಷಮದಲ್ಲಿ ಸಭೆಯು ಜರುಗಿತು. ಪರ್ಯಾಯ ವ್ಯವಸ್ಥೆ ಹಾಗೂ ನೂತನ ಕಟ್ಟಡದಲ್ಲಿ ಇದೇ ವ್ಯಾಪಾರಸ್ಥರಿಗೆ ಅವಕಾಶ ನೀಡುವ ಬಗ್ಗೆ ಸಂಸದರು, ಶಾಸಕರು, ವಾರದೊಳಗೆ ಮತ್ತೆ ಸಭೆ ನಡೆಸಿ ವ್ಯಾಪಾರಸ್ಥರ ಹಿತ ಕಾಯಲಾಗುವುದು ಎಂದು ಭರವಸೆ ನೀಡಿದರು.ಆದರೆ ಒಂದು ವರ್ಷ ಕಳೆದರೂ ಪರ್ಯಾಯ ವ್ಯವಸ್ಥೆ ಮರೀಚಿಕೆಯಾಗಿದೆ ಹಾಗೂ ವ್ಯಾಪಾರಸ್ಥರ ಹಿತ ಕಾಯುವ ಬದಲು ಬೀದಿಪಾಲು ಮಾಡಿದೆ.
ದ.ಕ.ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ ಸೆಂಟ್ರಲ್ ಮಾರ್ಕೆಟ್ ನ ಸುಮಾರು 600ರಷ್ಟು ವ್ಯಾಪಾರಸ್ಥರು ಕಳೆದ ಕೆಲವು ದಶಕಗಳಿಂದ ವ್ಯಾಪಾರ ಮಾಡುತ್ತಿದ್ದು, ಅವರಿಗೆ ಸರಿಯಾದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಹಾಗೂ ನೂತನ ಕಟ್ಟಡದಲ್ಲಿ ವ್ಯಾಪಾರ ಮಾಡಲು ಮೊದಲ ಪ್ರಾಶಸ್ತ್ಯ ನೀಡಬೇಕು, ಇಲ್ಲದಿದ್ದಲ್ಲಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಪ್ರಬಲ ಹೋರಾಟವನ್ನು ನಡೆಸಬೇಕಾದೀತು. ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಈ ಬಗ್ಗೆ ಕೂಡಲೇ ಗಮನ ಹರಿಸಬೇಕಾಗಿದೆ.
- ಸುನಿಲ್ ಕುಮಾರ್ ಬಜಾಲ್
CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ