ಒಳ ಉಡುಪು ಕೊಳ್ಳಲು ಬಟ್ಟೆಯಂಗಡಿ ತೆರೆಸಿ ಎಂದು ಸಿಎಂಗೆ ಮನವಿ
ಮೈಸೂರು: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬಗ್ಗೆಯೇ ಸರ್ಕಾರ ಹೆಚ್ಚು ಒತ್ತು ನೀಡಿತ್ತು. ಆದರೆ, ವ್ಯಕ್ತಿಯೊಬ್ಬರು ಬಟ್ಟೆಯಂಗಡಿ ತೆರೆಸಿ ಎಂದು ಸಿಎಂ ಯಡಿಯೂರಪ್ಪನವರಿಗೆ ಮಾಡಿರುವ ಮನವಿ ಇದೀಗ ವ್ಯಾಪಕ ಚರ್ಚೆಗೀಡಾಗಿದೆ.
ಮೈಸೂರಿನ ವ್ಯಕ್ತಿಯೊಬ್ಬರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು,ತನ್ನ ಬಳಿ ಇರುವ ಎರಡೂ ಒಳ ಉಡುಪುಗಳು ಹರಿದು ಹೋಗಿವೆ. ಹೀಗಾಗಿ ತಿಂಗಳಲ್ಲಿ ಅಥವಾ ವಾರಕ್ಕೆ ಒಂದು ಬಾರಿಯಾದರೂ ಬಟ್ಟೆ ಅಂಗಡಿ ತೆರೆಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮೈಸೂರಿನ ಚಾಮರಾಜಪುರದ ಕೊ.ಸು.ನರಸಿಂಹಮೂರ್ತಿ ಈ ಪತ್ರವನ್ನು ಬರೆದಿದ್ದಾರೆ ಎಂದು ವರದಿಯಾಗಿದ್ದು, ಮಾನ್ಯ ಮುಖ್ಯಮಂತ್ರಿಗಳೇ, ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸಬಹುದು. ಆದರೆ ಪರಿಸ್ಥಿತಿಯನ್ನು ಒಮ್ಮೆ ನೀವು ಅವಲೋಕನೆ ಮಾಡಿ. ಕಳೆದೆರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಜನರ ಕಷ್ಟವೇನು ಇದರಿಂದ ಎಂದು ನಿಮಗೆ ತಿಳಿದಿದೆಯೇ?, ಕೇವಲ ಎರಡು ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಉಡುಪುಗಳು ಹರಿಯುತ್ತಿದೆ. ಇನ್ನು ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಇರಬಹುದು. ಯಾರ ಹತ್ತಿರವೂ ಹೇಳುವುದು ನಮ್ಮ ಈ ಕಷ್ಟವನ್ನು? ನಿಮಗೆ ಜನರ ಅಂತರಾಳದ ಕಷ್ಟ ತಿಳಿದರೆ ಸಾಕು. ತಿಂಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಬಟ್ಟೆ ಅಂಗಡಿಯನ್ನು ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಇಂತಹ ಸಮಸ್ಯೆಗಳಾಗಿರುವುದು ಸಹಜವಾಗಿದೆ. ಆದರೆ ಬಹುತೇಕ ಜನರು ಈ ಬಗ್ಗೆ ಮಾತನಾಡಲು ಅಂಜಿಕೊಳ್ಳುತ್ತಾರೆ. ಆದರೆ ನರಸಿಂಹ ಮೂರ್ತಿ ಎಂಬವರು ನೇರವಾಗಿ ಈ ಬಗ್ಗೆ ಪತ್ರ ಬರೆದಿದ್ದಾರೆ.