ದೆಹಲಿ ಭೇಟಿಯ ಬಗ್ಗೆ ಬಿ.ವೈ.ವಿಜಯೇಂದ್ರ ನೀಡಿದ ಸ್ಪಷ್ಟನೆ ಏನು?
ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ಭೇಟಿ ನೀಡಿದ ವಿಚಾರ ನಿನ್ನೆ ರಾಜ್ಯದಲ್ಲಿ ಬಹಳಷ್ಟು ಚರ್ಚೆಗೀಡಾಗಿತ್ತು. ಸಿಎಂ ಯಡಿಯೂರಪ್ಪ ವಿರುದ್ಧದ ಬಣವೊಂದು ದೆಹಲಿಯಲ್ಲಿ ಸಿಎಂ ಬದಲಾವಣೆಯ ವಿಚಾರವಾಗಿ ಹೈಕಮಾಂಡ್ ನ್ನು ಸಂಪರ್ಕಿಸಿದೆ ಎನ್ನುವ ಶಂಕೆ ಹಾಗೂ ಸಿ.ಪಿ.ಯೋಗೇಶ್ವರ್ ಅವರು ಸಿಎಂ ವಿರುದ್ಧ ಪರೋಕ್ಷ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ವಿಜಯೇಂದ್ರ ಹೈಕಮಾಂಡ್ ನ್ನು ಭೇಟಿ ಮಾಡಿದ್ದಾರೆ ಎಂದು ಚರ್ಚೆಯಾಗಿತ್ತು.
ಇಂದು ಈ ಬಗ್ಗೆ ಸ್ವತಃ ವಿಜಯೇಂದ್ರ ಅವರು ಸ್ಪಷ್ಟನೆ ನೀಡಿದ್ದು, ಈ ರೀತಿಯ ಸುದ್ದಿಗಳು ಯಾಕೆ ಸೃಷ್ಟಿಯಾಗುತ್ತವೋ ನನಗೆ ಗೊತ್ತಿಲ್ಲ. ಆದರೆ ನಾನು ನನ್ನ ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೇನೆ. ನಾನು ಆಗಾಗ ದೆಹಲಿಗೆ ಹೋಗುತ್ತಿರುತ್ತೇನೆ. ಈ ಸಂದರ್ಭದಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗುತ್ತೇನೆ ಎನ್ನುವುದು ಇದರ ಅರ್ಥವಲ್ಲ ಎಂದು ಅವರು ಹೇಳಿದರು.
ಇನ್ನೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ವಿಜಯೇಂದ್ರ ಭೇಟಿ ಮಾಡಿದ್ದಾರೆ ಎನ್ನುವ ವಿಚಾರವನ್ನು ಅವರು ನಿರಾಕರಿಸಿದ್ದು, ಕರ್ನಾಟಕ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಯಾವುದೇ ಭೇಟಿ, ಯಾವುದೇ ಚರ್ಚೆಗಳು ನಡೆದಿಲ್ಲ. ಮತ್ತು ನಾನು ಯಾವುದೇ ನಾಯಕರ ಭೇಟಿಗಾಗಿ ಅಪಾಯಿಂಟ್ ಮೆಂಟ್ ಕೂಡ ಪಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.