ಲಾಕ್ ಡೌನ್ ನಡುವೆಯೇ “ಕೊರೊನಾಮ್ಮ” ಎಂಬ ಹೆಸರಿನಲ್ಲಿ ಪೂಜೆ ಮಾಡಿದ ಗ್ರಾಮಸ್ಥರು!
03/06/2021
ಬಳ್ಳಾರಿ: ಕೊರೊನಾ ಸಾಂಕ್ರಾಮಿಕ ರೋಗ ದೂರವಾಗಲು ಗ್ರಾಮಸ್ಥರೆಲ್ಲ ಗುಂಪು ಸೇರಿ ಪೂಜೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ತಿಪ್ಪೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊರೊನಾ ವೈರಸ್ ಬಂದ ಬಳಿಕ “ಕೊರೊನಾಮ್ಮ” ಎಂಬ ಎಂಬ ಹೆಸರಿನಲ್ಲಿ ಪೂಜೆಗಳು ನಡೆಯುತ್ತಿದೆ. ಜನರು ಗುಂಪು ಸೇರಿ ಬೇವಿನ ಸೊಪ್ಪು ಹಾಕಿ ಪೂಜೆ ಮಾಡಿ, ಕೊರೊನಾಮ್ಮ, ನಮ್ಮೂರಿಗೆ ಬರ್ಬೇಡ, ಸಾವು ನೋವುಗಳನ್ನು ಸೃಷ್ಟಿಸಬೇಡ ಎಂದು ಊರಾಚೆಗೆ ಬಿಟ್ಟು ಬರುವಂತಹ ಆಚರಣೆಯನ್ನು ನಡೆಸಲಾಗಿದೆ ಎಂದು ವರದಿಯಾಗಿದೆ.
ಜಿಲ್ಲಾಡಳಿತ, ಕೊರೊನಾಕ್ಕೆ ಸಂಬಂಧಪಟ್ಟಂತೆ ಮೌಢ್ಯಾಚರಣೆಯನ್ನು ನಿಷೇಧಿಸಿದೆ. ಜೊತೆಗೆ ಗುಂಪು ಸೇರಿ ಕೊವಿಡ್ ಮಾರ್ಗಸೂಚಿಗಳನ್ನು ಮೀರಬಾರದು ಎನ್ನುವ ಆದೇಶವನ್ನು ನೀಡಿದ್ದರೂ, ಜನರಿಗೆ ಇನ್ನೂ ತಲುಪಿಲ್ಲ. ಈ ಬಗ್ಗೆ ಸರ್ಕಾರ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.