ಕೊರೊನಾ ಮುಕ್ತ ಗ್ರಾಮ ಸ್ಪರ್ಧೆ | ವಿಜೇತ ಗ್ರಾಮಗಳಿಗೆ 50 ಲಕ್ಷ ರೂ. ಬಹುಮಾನ!
ಮುಂಬೈ: ಕೊರೊನಾದಿಂದ ಮುಕ್ತವಾಗಲು ನಾನಾ ರಾಜ್ಯಗಳು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಡುವೆ ಮಹಾರಾಷ್ಟ್ರ ರಾಜ್ಯ ವಿಶೇಷವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಲು ಮುಂದಾಗಿದೆ.
ಕೊರೊನಾ ಎರಡನೇ ಅಲೆಯಲ್ಲಿ ಜರ್ಝರಿತವಾಗಿರುವ ಮಹಾರಾಷ್ಟ್ರ, ಕೊರೊನಾ ಮುಕ್ತ ಗ್ರಾಮ ಮಾಡಲು ಮುಂದಾಗಿದೆ. ಪ್ರತಿ ಗ್ರಾಮಗಳೂ ಕೊರೊನಾ ಮುಕ್ತವಾಗಬೇಕಾದರೆ, ಜನರಲ್ಲಿ ಜಾಗೃತಿ ಮುಖ್ಯವಾಗುತ್ತದೆ. ನಗರದಿಂದ ಗ್ರಾಮಗಳಿಗೆ ನುಗ್ಗಿರುವ ಕೊರೊನಾ ವೈರಸ್ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಸರ್ಕಾರಗಳು ಮುಂದಾಗುತ್ತಿವೆ.
ಮಹಾರಾಷ್ಟ್ರವು “ಕೊರೊನಾ ಮುಕ್ತ ಗ್ರಾಮ” ಎನ್ನುವ ಸ್ಪರ್ಧೆಯನ್ನು ಆಯೋಜಿಸಿದ್ದು, ಕೊರೊನಾ ಮುಕ್ತ ಗ್ರಾಮ ಪಂಚಾಯತ್ ಗೆ 50 ಲಕ್ಷ ರೂಪಾಯಿ ಬಹುಮಾನಗಳನ್ನು ಘೋಷಿಸಿದೆ.
ಈ ಬಹುಮಾನದ ಹಣವನ್ನು ಗ್ರಾಮ ಪಂಚಾಯತ್ ಗ್ರಾಮದ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತದೆ ಎಂದು ಸರ್ಕಾರ ಹೇಳಿದ್ದು, ಈ ಬಹುಮಾನಕ್ಕಾಗಿ 22 ಮಾನದಂಡಗಳ ಆಧಾರದ ಮೇಲೆ ತೀರ್ಪು ನಿರ್ಣಯ ಮಾಡಲಾಗುವುದು ಎಂದು ಸರ್ಕಾರ ಹೇಳಿದ್ದು, ಕೊರೊನಾ ಮುಕ್ತ ಗ್ರಾಮಗಳ ಬಗ್ಗೆ ಮಾಹಿತಿ ಪರಿಶೀಲನೆಗೆ ವಿಶೇಷ ಸಮಿತಿಯನ್ನು ಕೂಡ ರಚಿಸಿದೆ.