ಯೋಗಿ ಆದಿತ್ಯನಾಥ್ ಸಿಎಂ ಸ್ಥಾನಕ್ಕೆ ಕಂಟಕ? | ವೈಫಲ್ಯಗಳಿಗೆ ಹೈಕಮಾಂಡ್ ಗರಂ ಆಯಿತೇ?
ನವದೆಹಲಿ: ಉತ್ತರ ಪ್ರದೇಶದಲ್ಲಿ ಕೊವಿಡ್ ನಿರ್ವಹಣೆ ವೈಫಲ್ಯ ಸೇರಿದಂತೆ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನ್ನು ಬಿಜೆಪಿ ಸಿಎಂ ಸ್ಥಾನದಿಂದ ತೆಗೆದು ಹಾಕಲು ಮುಂದಾಗಿದೆ ಎನ್ನುವ ಸುದ್ದಿಗಳು ಇದೀಗ ವ್ಯಾಪಕ ವೈರಲ್ ಆಗಿವೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ಎರಡು ದಿನ ರಾಜ್ಯ ಸರ್ಕಾರದ ಬಗ್ಗಹೆ ಪರಾಮರ್ಶೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೋವಿಡ್ ನಿರ್ವಹಣೆ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಮಂಗಳವಾರ ಬಿ.ಎಲ್. ಸಂತೋಷ್ ಟ್ವೀಟ್ ಮಾಡಿದ್ದರು ಎಂದು ವರದಿಯಾಗಿದೆ. ಇದು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಬಗ್ಗೆ ಬಿಜೆಪಿ ಅಸಮಾಧಾನ ಹೊಂದಿದೆ ಎಂಬ ಸುದ್ದಿಗೆ ಕಾರಣವಾಗಿತ್ತು.
ಈ ನಡುವೆ ಯೋಗಿ ಆದಿತ್ಯನಾಥ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಯೋಗಿ ಆದಿತ್ಯನಾಥ್ ಅವರಿಗೆ ಶುಭಕೋರಿ ಟ್ವೀಟ್ ಮಾಡಿಲ್ಲ. ಈ ಎಲ್ಲ ಅಂಶಗಳು ಉತ್ತರ ಪ್ರದೇಶದಲ್ಲಿ ಆಡಳಿತ ವೈಫಲ್ಯದಿಂದ ಬಿಜೆಪಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಗೆಲುವು ಬಹಳ ಕಠಿಣವಾಗಲಿದ್ದು, ಈ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮವನ್ನು ಕೈಗೊಳ್ಳುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ ಎನ್ನುವ ಚರ್ಚೆಗಳಿಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು, ಕೊವಿಡ್ ಹಿನ್ನೆಲೆಯಲ್ಲಿ ಸದ್ಯ ಯಾರಿಗೂ ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿಲ್ಲ. ಹೀಗಾಗಿ ಯೋಗಿ ಆದಿತ್ಯನಾಥ್ ಅವರಿಗೂ ಟ್ವೀಟ್ ಮಾಡಿ ಶುಭಕೋರಿಲ್ಲ, ಅವರು ದೂರವಾಣಿ ಕರೆಯ ಮೂಲಕ ಶುಭಕೋರಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ ಎಂದು ಹೇಳಲಾಗಿದೆ.
ಉತ್ತರಪ್ರದೇಶ ಕೊವಿಡ್ ನಿರ್ವಹಣೆ ವಿಚಾರವಾಗಿ ಬರುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ತೀವ್ರವಾಗಿ ಚಿಂತಿತರಾಗಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಮಾಡುವ ಸಾಧ್ಯತೆಗಳಿವೆ ಎನ್ನುವ ಚರ್ಚೆಗಳು ಜೀವಂತವಾಗಿಯೇ ಇದೆ. ಕೊವಿಡ್ ನಿರ್ವಹಣೆಯಲ್ಲಿ ಮಾಧ್ಯಮಗಳನ್ನು ಗುರಿಯಾಗಿಸಿ ಯೋಗಿ ಸರ್ಕಾರ ನಡೆಸಿರುವ ಕ್ರಮಗಳ ಬಗ್ಗೆ ವ್ಯಾಪಕ ಆಕ್ರೋಶಗಳು ಕೂಡ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶಗಳು ಕೂಡ ಕೇಳಿ ಬಂದಿವೆ. ಉತ್ತರ ಪ್ರದೇಶದಲ್ಲಿ ಯಾವುದೋ ಒಂದು ದೊಡ್ಡಮಟ್ಟದ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ. ಅದು ಸಿಎಂ ಆದಿತ್ಯನಾಥ್ ಅವರನ್ನು ಸಿಎಂ ಸ್ಥಾನದಿಂದ ಇಳಿಸುವ ಕ್ರಮವೂ ಇರಬಹುದು ಎನ್ನುವ ಚರ್ಚೆಗಳು ಈ ವಿದ್ಯಮಾನಗಳ ಹಿಂದೆಯೇ ಕೇಳಿ ಬಂದಿವೆ. ವಿವಿಧ ಮಾಧ್ಯಮಗಳಲ್ಲಿ ಈ ವಿಚಾರ ಗಂಭೀರ ಚರ್ಚೆಗಳನ್ನು ಕೂಡ ಹುಟ್ಟುಹಾಕಿದೆ ಎಂದು ವರದಿಯಾಗಿದೆ.