ಹೈಕಮಾಂಡ್ ಹೇಳಿದ ತಕ್ಷಣವೇ ರಾಜೀನಾಮೆ ನೀಡುತ್ತೇನೆ | ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಯಡಿಯೂರಪ್ಪ ಹೇಳಿಕೆ
ಬೆಂಗಳೂರು: ಎಲ್ಲಿಯವರೆಗೆ ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇಟ್ಟಿರುತ್ತೋ ಅಲ್ಲಿಯವರೆಗೆ ನಾನು ಸಿಎಂ ಆಗಿರುತ್ತೇನೆ. ನೀವು ಬೇಡ ಎಂದ ದಿನವೇ ರಾಜೀನಾಮೆ ನೀಡಿ, ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನಾಯಕತ್ವ ಬದಲಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಚರ್ಚೆಯ ನಡುವೆಯೇ ಸಿಎಂ ಯಡಿಯೂರಪ್ಪನವರು ನೀಡಿದ ಹೇಳಿಕೆ ಮಹತ್ವ ಪಡೆದುಕೊಂಡಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎನ್ನುವ ವಿಚಾರ ಇಲ್ಲ ಎಂದು ಒಂದೆಡೆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಇನ್ನೊಂದೆಡೆ ನಾಯಕತ್ವ ಬದಲಾವಣೆ ಇದೆ ಎಂದು ಬಿಜೆಪಿ ಶಾಸಕರು, ಸಚಿವರೇ ಹೇಳುತ್ತಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆಯೇ ಸಿಎಂ ಯಡಿಯೂರಪ್ಪ ಈ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಪರ್ಯಾಯ ನಾಯಕರು ಇಲ್ಲ ಎಂಬುದು ನಾನು ಒಪ್ಪಲ್ಲ. ದೇಶದಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಯಾವಾಗಲೂ ಪರ್ಯಾಯ ವ್ಯಕ್ತಿಗಳು ಇರುತ್ತಾರೆ. ಆದರೆ ಹೈಕಮಾಂಡ್ ಎಲ್ಲಿಯವರೆಗೂ ನನ್ನ ಬಗ್ಗೆ ವಿಶ್ವಾಸ ಇಟ್ಟಿರೊತ್ತೊ ಅಲ್ಲಿಯವರೆಗೂ ಸಿಎಂ ಆಗಿರುತ್ತೇನೆ ಎಂದರು ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಾಯಕತ್ವದಲ್ಲಿ ಅಪಸ್ವರ ಇಲ್ಲ
ಇತ್ತ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ನಾಯಕತ್ವದಲ್ಲಿ ಅಪಸ್ವರ ಇಲ್ಲ. ಕೋವಿಡ್ ನಿಯಂತ್ರಣಕ್ಕೆ ಆದ್ಯತೆ ನೀಡಲು ಎಲ್ಲ ಸಚಿವರು, ಶಾಸಕರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
“ಯಡಿಯೂರಪ್ಪರನ್ನು ನಂಬಿ ಪಕ್ಷಕ್ಕೆ ಬಂದ್ವಿ”ಎಂದ ಸುಧಾಕರ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಸೂಚಿಸಿದ ಕೂಡಲೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂಬುದಾಗಿ ಯಾವ ಹಿನ್ನಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಿಎಂ ಯಡಿಯೂರಪ್ಪ ಹೇಳಿಕೆಯ ಹಿಂದೆ ಯಾವುದೇ ಉದ್ದೇಶ ಇರುತ್ತದೆ ಎಂದರು.
ಕಾಂಗ್ರೆಸ್ ನಿಂದ, ಜೆಡಿಎಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಬಂದಿದ್ದು, ಬಿ.ಎಸ್ .ಯಡಿಯೂರಪ್ಪ ಅವರ ಮೇಲಿನ ನಂಬಿಕೆಯಿಂದ ಆಗಿದೆ. ಈಗ ಅವರೇ ಯಾಕ್ ಹೀಗೆ ಹೇಳಿದ್ದಾರೋ ಅನ್ನೋದು ಗೊತ್ತಿಲ್ಲ ಎನ್ನುವ ಮೂಲಕ, ಸಿಎಂ ಯಡಿಯೂರಪ್ಪ ರಾಜೀನಾಮೆಯ ಮಾತಿಗೆ ಆತಂಕ ವ್ಯಕ್ತ ಪಡಿಸಿದ್ದಾರೆ.