ಮದುವೆಯ ಹಿಂದಿನ ದಿನವೇ ನೇಣಿಗೆ ಶರಣಾದ ಯುವಕ | ಕಾರಣ ಏನು ಗೊತ್ತಾ?

ರಂಗಾರೆಡ್ಡಿ: ಮದುವೆಯ ಹಿಂದಿನ ದಿನವೇ ಮದುಮಗನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದ್ದು, ಮದುವೆಗಾಗಿ ಸಂಬಂಧಿಕರು, ಕುಟುಂಬಸ್ಥರು ಮನೆಗೆ ಆಗಮಿಸಿ ಸಿದ್ಧತೆಯಲ್ಲಿ ತೊಡಗಿದ್ದರೆ ವರ ನೇಣಿಗೆ ಶರಣಾಗಿದ್ದಾನೆ.
ಮೆದಕ್ ಪಲ್ಲಿ ನಿವಾಸಿ ಯಾದಮ್ಮ ಮತ್ತು ಲಿಂಗಯ್ಯ ಎಂಬವರ ಮಗ 25 ವರ್ಷ ವಯಸ್ಸಿನ ಶ್ರೀಕಾಂತ್ ಗೌಡ ಆತ್ಮಹತ್ಯೆಗೆ ಶರಣಾಗಿರುವ ಯುವಕನಾಗಿದ್ದು, ಈತನಿಗೆ ಕಂದಕೂರು ತಾಲೂಕಿನ ಗ್ರಾಮವೊಂದರ ಯುವತಿಯೊಂದಿಗೆ ಜೂನ್ 4ರಂದು ವಿವಾಹ ನಿಶ್ಚಯವಾಗಿತ್ತು.
ಮದುವೆಯ ಹಿಂದಿನ ದಿನ ವರ ಶ್ರೀಕಾಂತ್ ನ ಸಹೋದರ ರಾಜು ವಿವಾಹಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದರು. ಮನೆಯ ಮುಂದೆ ಚಪ್ಪರ ಹಾಕುವ ಕೆಲಸ ನಡೆಸುತ್ತಿದ್ದ ವೇಳೆ ಶ್ರೀಕಾಂತ್ ತಮ್ಮ ಹಳೆಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಸಹೋದರ ರಾಜು ಕೂಡ ಹಳೆಯ ಮನೆಗೆ ಹೋಗಿ, ಕೆಲಸದ ನಿಮಿತ್ತ ಮತ್ತೆ ಹೊರಗೆ ಹೋಗಿದ್ದರು. ಈ ರೀತಿ ಹೋಗಿ ಬರುವ ವೇಳೆ ಶ್ರೀಕಾಂತ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಶ್ರೀಕಾಂತ್ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಮದುವೆಯ ಹಿಂದಿನ ದಿನವೇ ವರ ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಸದ್ಯ ಮೃತನ ತಾಯಿ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.