ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಬೈಕ್ ನಲ್ಲಿ ಹೋಗುತ್ತಿರುವಾಗಲೇ ಇರಿದು ಕೊಂದ ತಂದೆ - Mahanayaka
1:01 AM Wednesday 11 - December 2024

ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಬೈಕ್ ನಲ್ಲಿ ಹೋಗುತ್ತಿರುವಾಗಲೇ ಇರಿದು ಕೊಂದ ತಂದೆ

hydrabad cc camra
07/06/2021

ಹೈದರಾಬಾದ್: ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆಕ್ರೋಶಗೊಂಡ ತಂದೆಯೋರ್ವ, ಉಪಾಯವಾಗಿ ಯುವಕನ ಬೈಕ್ ಏರಿ ಹಿಂದಿನಿಂದ ಕುತ್ತಿಗೆಗೆ ಇರಿದು ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ನಡೆದಿದೆ.

ಶಾರೂಖ್ ಎಂಬಾತ ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ತಂದೆ ಅನ್ವರ್ ಫಲಕ್ ನುಮಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಈ ಸಂಬಂಧ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದರು.

ಇಷ್ಟೆಲ್ಲ ನಡೆದರೂ ಆರೋಪಿ ಶಾರೂಕ್ ಅನ್ವರ್ ಅವರ ಪುತ್ರಿಯ ಹಿಂದೆ ಬಿದ್ದು ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ನಿನ್ನ ಮಗಳನ್ನು ನಾನು ಮದುವೆ ಮಾಡಿಕೊಳ್ಳುತ್ತೇನೆ. ನನ್ನ ಜೊತೆಗೆ ನಿನ್ನ ಮಗಳನ್ನು ಕಳಿಸು ಎಂದು ಆತ ಪೀಡಿಸಲು ಆರಂಭಿಸಿದ್ದಾನೆ. ಇದರಿಂದ ರೋಸಿ ಹೋದ ತಂದೆ ಅನ್ವರ್,  ಶಾರೂಕ್ ನನ್ನು ಮುಗಿಸಲು ಯೋಜನೆ ರೂಪಿಸಿದ್ದಾನೆ.

ಶಾರೂಕ್ ಗೆ ಕರೆ ಮಾಡಿದ ಅನ್ವರ್, ನಿನ್ನ ಜೊತೆಗೆ ನನಗೆ ಮಾತನಾಡಲಿಕ್ಕಿದೆ. ಮನೆ ಬಳಿಗೆ ಬಾ ಎಂದು ಕರೆಸಿಕೊಂಡಿದ್ದಾನೆ.  ಶಾರೂಕ್ ತನ್ನ ಉದ್ದೇಶ ಈಡೇರುತ್ತಿದೆ ಎಂದು ಭಾವಿಸಿ ಮನೆ ಬಳಿಗೆ ಬಂದಿದ್ದಾನೆ.  ಬಳಿಕ ಅಲ್ಲಿಂದ ಬೈಕ್ ನಲ್ಲಿ ಇಬ್ಬರೂ ತೆರಳಿದ್ದಾರೆ.  ಈ ಸಂದರ್ಭ ಸಮಯ ನೋಡಿ ಅನ್ವರ್, ತಾನು ತಂದಿದ್ದ ಚಾಕುವಿನಿಂದ ಶಾರೂಕ್ ನ ಕುತ್ತಿಗೆಗೆ ಇರಿದಿದ್ದಾನೆ.

ಏಕಾಏಕಿ ನಡೆದಿರುವ ದಾಳಿಯಿಂದ ಕಂಗೆಟ್ಟ ಶಾರೂಕ್  ಬೈಕ್ ನೊಂದಿಗೆ ಕೆಳಗೆ ಬಿದ್ದಿದ್ದಾನೆ. ಅಲ್ಲಿಂದ ಸ್ವಲ್ಪ ದೂರದ ಬಸ್ ನ ಡಿಪೋ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು,  ತನಿಖೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇತ್ತೀಚಿನ ಸುದ್ದಿ