ಸರ್ಕಾರಿ ಮುದ್ರೆ ದುರ್ಬಳಕೆ ಮಾಡಿ ನಟ ಚೇತನ್ ವಿರುದ್ಧ ಪಿತೂರಿ | ದ್ರಾವಿಡ ಆರ್ಮಿಯಿಂದ ದೂರು - Mahanayaka
8:15 AM Wednesday 5 - February 2025

ಸರ್ಕಾರಿ ಮುದ್ರೆ ದುರ್ಬಳಕೆ ಮಾಡಿ ನಟ ಚೇತನ್ ವಿರುದ್ಧ ಪಿತೂರಿ | ದ್ರಾವಿಡ ಆರ್ಮಿಯಿಂದ ದೂರು

chethan
08/06/2021

ಬೆಂಗಳೂರು: ಸರ್ಕಾರಿ ಮುದ್ರೆಯನ್ನು  ದುರ್ಬಳಕೆ ಮಾಡಿಕೊಂಡು ಸಮುದಾಯವೊಂದರ ಹೆಸರನ್ನು ಬಳಸಿಕೊಂಡು ಆದಿನಗಳ ಖ್ಯಾತಿಯ ನಟ  ಚೇತನ್ ಅಹಿಂಸಾ ಚೇತನ್ ಅವರ ವಿರುದ್ಧ ದುರುದ್ದೇಶಪೂರಿತ ಕೇಸ್ ದಾಖಲಿಸಿರುವುದರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಈ ವಿಚಾರವಾಗಿ ದ್ರಾವಿಡ ಆರ್ಮಿ ಮುಖಂಡ ಸಂಪತ್ ಸುಬ್ಬಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಸರ್ಕಾರಿ ಮುದ್ರೆ ದುರುಪಯೋಗ ಪಡಿಸಿಕೊಂಡಿರುವ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಎಸ್. ಸಚ್ಚಿದಾನಂದ ಮೂರ್ತಿ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ದೂರು ನೀಡಿದ್ದಾರೆ.

ಕನ್ನಡದ ಖ್ಯಾತ ನಟ ಚೇತನ್ ಅಹಿಂಸಾ ಅವರು ರಾಜ್ಯಾದ್ಯಂತ ಕೊರೋನಾ ಸೋಂಕಿತರು/ ಕೊರೋನಾ ವಾರಿಯರ್ಸ್/ಲಾಕ್ ಡೌನ್ ಸಂತ್ರಸ್ತರಿಗೆ ಜೀವನಾಗತ್ಯ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವುದು ತಮಗೆ ತಿಳಿದಿದೆ ಎಂದು ಭಾವಿಸುತ್ತೇವೆ. ಈ ಸಂದರ್ಭದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಆಹಾರ ವಿತರಣೆಯನ್ನು ಮಾಡಿದ ನಟರೊಬ್ಬರ ಬಗ್ಗೆ ಮನುಷ್ಯ ಸಹಜವಾಗಿ ಚೇತನ್ ರವರು ಟೀಕಿಸಿದ್ದರು. ಸಮಾನತೆಯನ್ನು ಬಯಸುವ, ಸಂವಿಧಾನದಲ್ಲಿ ನಂಬಿಕೆ ಇರುವ ಭಾರತದ ಯಾವ ನಾಗರಿಕನೂ ಕೊರೋನಾ ಸಂತ್ರಸ್ತರಲ್ಲೂ ಬ್ರಾಹ್ಮಣರನ್ನು ಪ್ರತ್ಯೇಕಿಸುವುದನ್ನು ಒಪ್ಪಲಾರರು. ಅಂತೆಯೇ ನಟ ಚೇತನ್ ಕೂಡಾ ಅದನ್ನು ಖಂಡಿಸಿ ಮಾತನಾಡುವ ಜೊತೆಗೆ ಬ್ರಾಹ್ಮಣ್ಯದ ಅಪಾಯಗಳನ್ನು ಜನರಿಗೆ ಮನವರಿಕೆ ಮಾಡಿದ್ದರು

ಅದಕ್ಕಾಗಿ ಚೇತನ್ ಅವರು ದೇಶದ ಮಹಾನ್ ಚೇತನಗಳಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಚಿಂತಕ ಪೆರಿಯಾರ್ ಮಾತುಗಳನ್ನು ಉಲ್ಲೇಖಿಸಿದ್ದರು. “ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ… ನಾವು ಬ್ರಾಹ್ಮಣ್ಯವನ್ನು ಬೇರುಸಹಿತ ಕಿತ್ತುಹಾಕಬೇಕು” ಎಂದು ಅಂಬೇಡ್ಕರ್ ಹೇಳಿದ್ದನ್ನೇ ಅಂಬೇಡ್ಕರ್ ಹೆಸರಿನಲ್ಲಿಯೇ ಚೇತನ್ ಬರೆದಿದ್ದರು. ಮುಂದುವರೆದು “ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪ್ರಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ” ಎಂದು ಪೆರಿಯಾರ್ ಹೇಳಿದ್ದನ್ನು ಉಲ್ಲೇಖಿಸಿದ್ದರು.

ತಮ್ಮ ಮುಂದೆ ನಮ್ಮ ದೂರು ಏನೆಂದರೆ, ನಟ ಚೇತನ್ ಅವರ ವಿರುದ್ದ ಬ್ರಾಹ್ಮಣರನ್ನು ಎತ್ತಿಕಟ್ಟಿ ಅಶಾಂತಿ ಸೃಷ್ಟಿಸಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹೆಚ್ ಎಸ್ ಸಚ್ಚಿದಾನಂದ ಮೂರ್ತಿ ಎಂಬವರು ಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರಿ ಸಂಸ್ಥೆಯ ಹೆಸರು ಮತ್ತು ಸರ್ಕಾರಿ ಮುದ್ರೆ/ಲಾಂಛನವನ್ನು ದುರುಪಯೋಗಪಡಿಸಿಕೊಂಡು ಕ್ರಿಮಿನಲ್ ಅಪರಾಧ ಮಾಡಿದ್ದಾರೆ.

ಬ್ರಾಹ್ಮಣ ಅಭಿವೃದ್ದಿ ಮಂಡಳಿಯು ಬ್ರಾಹ್ಮಣರ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಮೀಸಲಾಗಿರುವ ಸರ್ಕಾರಿ ಸಂಸ್ಥೆಯಾಗಿದೆ. ಬಡ, ಹಿಂದುಳಿದ ಬ್ರಾಹ್ಮಣರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುವುದು ಮತ್ತು ಜಾರಿ ಮಾಡುವುದಷ್ಟೇ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಕೆಲಸವಾಗಿರುತ್ತದೆ. ಬಡ, ಹಿಂದುಳಿದ ಬ್ರಾಹ್ಮಣರ ಅಭಿವೃದ್ದಿಯ ನಿಟ್ಟಿನಲ್ಲಿ ಕೆಲಸ ಮಾಡದ ಮಂಡಳಿ ಅಧ್ಯಕ್ಷರು, ಸರ್ಕಾರಿ ದಾಖಲೆ/ಮುದ್ರೆ/ ಲಾಂಛನ ಮತ್ತು ಕರ್ನಾಟಕ ಸರ್ಕಾರ ಎಂಬ ಹೆಸರನ್ನು ದುರುಪಯೋಗಪಡಿಸಿಕೊಂಡು ನಟ ಚೇತನ್ ವಿರುದ್ದ ದೂರು ನೀಡುವ ಮೂಲಕ ಕ್ರಿಮಿನಲ್ ಅಪರಾಧ ಮಾಡಿದ್ದಾರೆ.

ಆದ್ದರಿಂದ ಬಸವ ಅನುಯಾಯಿ ಆಗಿರುವ ಶರಣ ಚೇತನ್ ಅಹಿಂಸಾ ವಿರುದ್ದ ಸರ್ಕಾರಿ ದಾಖಲೆಯನ್ನು ದುರುಪಯೋಗಪಡಿಸಿಕೊಂಡು ಬ್ರಾಹ್ಮಣರನ್ನು ಎತ್ತಿಕಟ್ಟುವ, ಸಮುದಾಯಗಳ ಮಧ್ಯೆ ಅಶಾಂತಿ‌ ಸೃಷ್ಟಿಸುವ ಮತ್ತು ಸರ್ಕಾರಿ ಲಾಂಛನ ದುರುಪಯೋಗ ಪಡಿಸಿಕೊಂಡಿರುವ ಹೆಚ್ ಎಸ್ ಸಚ್ಚಿದಾನಂದ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ದ್ರಾವಿಡ ಆರ್ಮಿ ದೂರಿನಲ್ಲಿ ಉಲ್ಲೇಖಿಸಿದೆ.

sampath subbaiha

ದ್ರಾವಿಡ ಆರ್ಮಿ ಮುಖಂಡ ಸಂಪತ್ ಸುಬ್ಬಯ್ಯ

ಇತ್ತೀಚಿನ ಸುದ್ದಿ