ಉಚಿತ ಕೋವಿಡ್ ಲಸಿಕೆ: ಕೇಂದ್ರ ಸರ್ಕಾರದ ಕ್ರಮಕ್ಕೆ ಮಾಯಾವತಿ ಸ್ವಾಗತ

ಲಕ್ನೋ: 18 ವರ್ಷಕ್ಕಿಂತ ಮೇಲ್ಪಟ್ಟ ದೇಶದ ಎಲ್ಲ ನಾಗರಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಸ್ವಾಗತಿಸಿದ್ದು, ಇದೇ ಸಂದರ್ಭದಲ್ಲಿ ಲಸಿಕೆ ನೀಡಲು ವಿಳಂಬವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೂನ್ 21ರಿಂದ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕೆಂಬ ಕೇಂದ್ರ ನಿರ್ಧಾರ ಸ್ವಾಗತಾರ್ಹ. ಆದರೆ ಇದು ಬಹಳ ವಿಳಂಬವಾಗಿದೆ. ನಮ್ಮ ಪಕ್ಷ ಮೊದಲಿನಿಂದಲೂ ದೇಶದಲ್ಲಿರುವ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ನೀಡಬೇಕೆಂದು ಒತ್ತಾಯಿಸುತ್ತಾ ಬಂದಿದೆ. ಈಗ ಲಸಿಕೆ ಪೂರೈಕೆ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಬೇಕಿದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವುದೊಂದೇ ಪರಿಹಾರ, ಲಸಿಕೆ ಹಾಕುವ ಹಾಗೂ ಹಾಕಿಸಿಕೊಳ್ಳುವ ವಿಷಯದಲ್ಲಿ ನಿರಾಕರಣೆ ಮತ್ತು ನಿರ್ಲಕ್ಷ್ಯ ಮಾಡುವುದು ನ್ಯಾಯಸಮ್ಮತವಲ್ಲ. ಹೀಗೆ ಮಾಡುವುದರಿಂದ ಅಪಾಯ ಎದುರಾಗಬಹುದು. ಲಸಿಕೆ ನೀಡುವುದು ತ್ವರಿತಗತಿಯಲ್ಲಿ ಸಾಗಲಿ ಎಂದು ಅವರು ಹೇಳಿದ್ದಾರೆ.
ಇನ್ನೂ ಕೊರೊನಾ ಲಸಿಕೆ ವಿಚಾರವಾಗಿ ಪಕ್ಷ ರಾಜಕಾರಣವನ್ನು ಬಿಟ್ಟು ಲಸಿಕೆ ಪೂರೈಕೆಗೆ ಗಮನ ಹರಿಸುವುದು ಅವಶ್ಯವಾಗಿದೆ ಎಂದು ಅವರು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.