ಪೆಟ್ರೋಲ್ ಬೆಲೆ ಏರಿಕೆಗೆ ಸೆಂಚುರಿ ಸಂಭ್ರಮ: ಕಾಂಗ್ರೆಸ್, ಎನ್ ಎಸ್ ಯುಐ ವಿನೂತನ ಪ್ರತಿಭಟನೆ - Mahanayaka
3:07 PM Thursday 12 - December 2024

ಪೆಟ್ರೋಲ್ ಬೆಲೆ ಏರಿಕೆಗೆ ಸೆಂಚುರಿ ಸಂಭ್ರಮ: ಕಾಂಗ್ರೆಸ್, ಎನ್ ಎಸ್ ಯುಐ ವಿನೂತನ ಪ್ರತಿಭಟನೆ

petrol price
11/06/2021

ವಿಜಯಪುರ: ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಎನ್ ಎಸ್ ಯು ಐ ವತಿಯಿಂದ ಜಂಟಿ ಪ್ರತಿಭಟನೆಯನ್ನು ಮುದ್ದೇಬಿಹಾಳದ ದಾನೇಶ್ವರ ಪೆಟ್ರೋಲ್ ಪಂಪಿನ ಬಳಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತಾ ಅಗತ್ಯ ವಸ್ತುಗಳ ಬೆಲೆ ಏರಿಕೆ,ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳಲು ಬಿಡದಂತೆ ಡಬಲ್ ಇಂಜಿನ್  ಸರ್ಕಾರಗಳು ಸೇರಿ ಜನತೆಯನ್ನು ಹಸಿಹಸಿಯಾಗಿ ಬಗೆದು ತಿನ್ನುತ್ತಿವೆ. ಕೇಂದ್ರ ಸರ್ಕಾರದಲ್ಲಿ ಕುಂತಿರುವ ಚುನಾಯಿತ ಪ್ರತಿನಿಧಿಗಳಿಗೆ ಜನಸಾಮಾನ್ಯರ ಕಷ್ಟಗಳು ಅರ್ಥವಾಗುತ್ತಿಲ್ಲ. ಅವರು ತಮ್ಮ ತಮ್ಮ ವಿಲಾಸಿ ಜೀವನ ನಡೆಸುವುದರಲ್ಲಿ ತಲ್ಲೀನರಾಗಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯು ಗಗನಮುಖಿಯಾಗಿದೆ.  ಮೂಲ ಬೆಲೆಗೆ 200ರಷ್ಟು ತೆರಿಗೆಯನ್ನು ಹಾಕಿ ಜನರ ಜೇಬು ಖಾಲಿ-ಖಾಲಿ ಮಾಡುತ್ತಿದೆ ಎಂದು ದೂರಿದರು.

ವಿಜಯಪುರ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷರಾದ ಸದ್ದಾಂ ಕುಂಟೋಜಿ  ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಜನರಿಗೆ ಮೋಸ ಮಾಡಿದೆ. ನರೇಂದ್ರ ಮೋದಿಜಿ ಅವರು ಹಸಿ ಸುಳ್ಳುಗಳನ್ನು ಹೇಳುತ್ತಾ, ಜನಸಾಮಾನ್ಯರು ದುಡಿದು ಆಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಜನರ ಧ್ವನಿಯನ್ನು ಸರ್ಕಾರ ಕೇಳುತ್ತಿಲ್ಲ ಒಟ್ಟಿನಲ್ಲಿ ತೆರಿಗೆ ಹೆಸರಿನಲ್ಲಿ ಭಯ ಹುಟ್ಟಿಸುತ್ತಿದೆ ಎಂದು ಅವರು ಆರೋಪಿಸಿದರು. ಜನರನ್ನು ನೆಮ್ಮದಿಯಾಗಿ ಬದುಕಲು ಬಿಡಿ ಎಂದು ಸರ್ಕಾರದ ಬಳಿ ಆಗ್ರಹಿಸಿದರು.

ಈ ವೇಳೆ ಮುದ್ದೇಬಿಹಾಳದ ಯುವ ಕಾಂಗ್ರೆಸ್ ಮುಖಂಡರಾದ ಪಿಂಟು ಸಾಲಿಮನಿ, ಪುರಸಭೆ ಸದಸ್ಯರಾದ ರಿಯಾಜ್ ಢವಲಗಿ, ಮುದ್ದೇಬಿಹಾಳ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಫೀಕ್ ಶಿರೋಳ, ಜಿಲ್ಲಾ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಗಳಾದ ಯೂಸುಫ್ ನಾಯ್ಕೋಡಿ,  ಗ್ರಾಮ ಪಂಚಾಯತಿ ಸದಸ್ಯರಾದ ಪ್ರಶಾಂತ್ ತರ್ನಲ್, ಮುದ್ದೇಬಿಹಾಳ ನಗರದ ಎನ್ ಎಸ್ ಯು ಐ ಅಧ್ಯಕ್ಷರಾದ ಅಬೂಬಕರ್ ಹಡಗಲಿ, ಮನಾಸ್ಸು ನಾಯಕ್, ಆಯುಬ್ ಮೋಮಿನ್, ಸಂಗು ಚಲವಾದಿ ,ಯಾಸಿನ್ ಭಗವಾನ್, ನಿಸಾರ್ ಮಾಮಧ ಪುರ್, ಶೋಯಬ್ ಪಾಟೇಲ್, ಸಂತೋಷ್ ನಾಯ್ಕೋಡಿ ಹಾಗೂ ಹಲವು ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಸರ್ಕಾರಗಳ ವಿರುದ್ಧ ವಿನೂತನವಾಗಿ ಕ್ರಿಕೆಟ್ ಪಂದ್ಯದಲ್ಲಿ ಸೆಂಚುರಿ ಹೊಡೆದಾಗ ಸಂಭ್ರಮಿಸುವಂತೆ ಸಂಭ್ರಮಿಸುವ ಮೂಲಕ  ಬೆಲೆ ಏರಿಕೆಯನ್ನು  ಪ್ರತಿಭಟನಾಕಾರರು ಖಂಡಿಸಿದರು.

ಇತ್ತೀಚಿನ ಸುದ್ದಿ