ಇಲ್ಲಿನ ಜನರು ಮನೆಗೆ ಬೀಗ ಹಾಕುವುದು ಮರೆತರೂ, ನೀರಿನ ಪಾತ್ರೆಗೆ ಬೀಗ ಹಾಕಲು ಮರೆಯಲ್ಲ
ರಾಜಸ್ಥಾನ: ಪರಿಸರ ಉಳಿಸಿ, ಹಾನಿ ಮಾಡಬೇಡಿ, ನೀರನ್ನು ಉಳಿಸಿ ಎಂದೆಲ್ಲ ಎಷ್ಟು ಬೊಬ್ಬೆ ಹೊಡೆದರೂ, ಪರಿಸರವನ್ನು ಹಾಳುಗೆಡವುವವರ ಸಂಖ್ಯೆ ಇನ್ನೂ ಇಳಿಕೆಯಾಗಿಲ್ಲ, ಈ ನಡುವೆ ಜಲಕ್ಷಾಮ ತಲೆದೋರುತ್ತಿದೆ. ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ಇಡೀಗ ಇಡೀ ದೇಶದ ಗಮನ ಸೆಳೆದಿದೆ.
ರಾಜಸ್ಥಾನದ ಅಜ್ಮೀರ್ ನ ಗ್ರಾಮೀಣ ಪ್ರದೇಶದ ನಿವಾಸಿಗಳು ತೀವ್ರವಾಗಿ ನೀರಿಗಾಗಿ ಪರದಾಟ ನಡೆಸುತ್ತಿದ್ದು, ಇವರಿಗೆ ಎಷ್ಟು ನೀರಿನ ಸಮಸ್ಯೆ ಉಂಟಾಗಿದೆ ಎಂದರೆ, ಎರಡು ದಿನಗಳಿಗೊಮ್ಮೆ ವಾಟರ್ ಟ್ಯಾಂಕರ್ ನಲ್ಲಿ ಇವರಿಗೆ ನಿಗದಿತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ.
ಕಳೆದ 12 ವರ್ಷಗಳಿಂದ ಇಲ್ಲಿನ ನಿವಾಸಿಗಳು ನೀರಿನ ತೀವ್ರ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇಲ್ಲಿನ ಜನರು ತಮ್ಮ ಮನೆಗೆ ಬೀಗ ಹಾಕುವುದನ್ನು ಮರೆತರೂ, ಕುಡಿಯುವ ನೀರಿನ ಟ್ಯಾಂಕ್ ಗೆ ಬೀಗ ಹಾಕುವುದನ್ನು ಮರೆಯುವುದಿಲ್ಲ.
ನೀರು ಸಂಗ್ರಹಕ್ಕೆಂದೇ ಪ್ರತ್ಯೇಕ ಡ್ರಮ್ ನ್ನು ಇಟ್ಟಿರುವ ಇಲ್ಲಿನ ನಿವಾಸಿಗಳು ಟ್ಯಾಂಕರ್ ನಿಂದ ನೀರು ತುಂಬಿಸಿದ ಬಳಿಕ ಡ್ರಮ್ ಗೆ ಬೀಗ ಹಾಕುತ್ತಾರೆ. ಯಾರು ಕೂಡ ನೀರನ್ನು ಕಳವು ಮಾಡಬಾರದು ಎನ್ನುವ ಉದ್ದೇಶದಿಂದ ಡ್ರಮ್ ಗೆ ಬೀಗ ಹಾಕಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
“ಅಜ್ಮೀರ್ ನ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ 48 ಗಂಟೆಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ಇಲ್ಲಿನ ರೂಪನ್ ಗರ್ ಸೇರಿದಂತೆ ಕೆಲವು ಗ್ರಾಮಗಳಿಗೆ ನೀರು ಸರಬರಾಜು ಇನ್ನೂ ತಡವಾಗುತ್ತದೆ. ಈ ಭಾಗದಲ್ಲಿ 72 ಗಂಟೆಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ಪೈಪ್ ಲೈನ್ ಹಾಗೂ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗುತ್ತಿರುವುದರಿಂದ ಈ ವಿಳಂಬವಾಗಿದೆ” ಎಂದು ಪಬ್ಲಿಕ್ ಹೆಲ್ತ್ ಡಿಪಾರ್ಟ್ ಮೆಂಟ್ ನ ಎಂಜಿನಿಯರ್ ಹೇಳಿದ್ದಾರೆ. ಆದರೆ 12 ವರ್ಷಗಳಿಂದಲೂ ಇಲ್ಲಿನ ನೀರಿನ ಸಮಸ್ಯೆ ಬಗೆ ಹರಿದಿಲ್ಲ.