ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥ್ ಆನಂದ್ ವಿರುದ್ಧ ಕಿಚ್ಚ ಸುದೀಪ್ ಸ್ಪರ್ಧೆ!
ಬೆಂಗಳೂರು: ಕ್ರಿಕೆಟ್ ನಲ್ಲಿ ಮಿಂಚಿದ್ದ ನಟ ಕಿಚ್ಚ ಸುದೀಪ್, ಇದೀಗ ಚೆಸ್ ಆಡಲಿದ್ದು, ಚೆಸ್ ಗ್ರ್ಯಾಂಡ್ ಮಾಸ್ಟರ್, ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥ್ ಆನಂದ್ ಅವರನ್ನು ಕಿಚ್ಚ ಸುದೀಪ್ ಎದುರಿಸಲಿದ್ದಾರೆ.
ನಟರಾದ ಅಮೀರ್ ಖಾನ್, ಕಿಚ್ಚ ಸುದೀಪ್, ರಿತೇಷ್ ದೇಶ್ ಮುಖ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಜೂನ್ 13ರಂದು ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರನ್ನು ಎದುರಿಸಲಿದ್ದಾರೆ.
ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್.ಕಾಮ್ ‘ಚೆಕ್‌ಮೇಟ್ ಕೋವಿಡ್’ ಸೆಲೆಬ್ರಿಟಿ ಆವೃತ್ತಿಯನ್ನು ನಡೆಸುತ್ತಿದ್ದು, ಭಾನುವಾರ ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ಐದು ಬಾರಿ ವಿಶ್ವಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರು ಎರಡು ಬ್ಯಾಚ್‌ಗಳಲ್ಲಿ ಅರ್ಧ ಗಂಟೆಗಳಂತೆ ಹಲವು ಗಣ್ಯರೊಂದಿಗೆ ಏಕಕಾಲದಲ್ಲಿ ಚೆಸ್ ಆಡಲಿದ್ದಾರೆ.
ಕ್ರಿಕೆಟ್ ಆಟಗಾರ ಯಜುವೇಂದ್ರ ಚಾಹಲ್, ಗಾಯಕಿ ಅನನ್ಯಾ ಬಿರ್ಲಾ, ಗಾಯಕ ಅರ್ಜಿತ್ ಸಿಂಗ್, ನಿರ್ಮಾಪಕ ಸಾಜಿದ್ ಕೂಡಾ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಸ್ಪರ್ಧೆಯ ನಂತರ ಸ್ಪರ್ಧಿಗಳೊಂದಿಗೆ ಆನಂದ್ ಸಂವಾದವನ್ನೂ ನಡೆಸಲಿದ್ದಾರೆ.
Chess.com – India ಯೂಟ್ಯೂಬ್ ಚಾನೆಲ್ ನಲ್ಲಿ ಈ ಆಟ ನೇರ ಪ್ರಸಾರವಾಗಲಿದೆ. ನಟ ಕಿಚ್ಚ ಅವರು ಚೆಸ್ ವಿಶ್ವ ಚಾಂಪಿಯನ್ ಜೊತೆಗೆ ಹೇಗೆ ಆಟವಾಡಲಿದ್ದಾರೆ ಎನ್ನುವುದನ್ನು ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಇಂತಹ ಚೆಸ್ ಆಟಗಳು ಬೇಕೇ ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಯಾಕೆಂದರೆ, ಕೊರೊನಾ ವಿರುದ್ಧ ಹೋರಾಡಲು ಹಣ ಸಂಗ್ರಹ ಮಾಡುವ ನಿಟ್ಟಿನಲ್ಲಿಯೇ ಈ ಆಟವನ್ನು ಆಯೋಜಿಸಲಾಗಿದೆ.