ಆಸ್ಪತ್ರೆಗೆ ಬಂದಾತ ರೋಗಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!
ಭೋಪಾಲ್: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ ಘಟನೆಯೊಂದು ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದ್ದು, ಸಿಸಿ ಕ್ಯಾಮರದಲ್ಲಿ ಈ ಭೀಕರ ದೃಶ್ಯ ಸೆರೆಯಾಗಿದೆ.
ಮಿಲನ್ ರಜಾಕ್ ಎಂಬಾತ ಈ ದುಷ್ಕೃತ್ಯ ಎಸಗಿದವನಾಗಿದ್ದು, ದಾಮೋದರ್ ಕೋರಿ ಸಂತ್ರಸ್ತ ವ್ಯಕ್ತಿಯಾಗಿದ್ದಾರೆ. ಮಿಲನ್ ರಜಾಕ್ ಕೋರಿ ಈ ಹಿಂದೆ ದಾಮೋದರ್ ಕೋರಿಗೆ ಹಲ್ಲೆ ನಡೆಸಿದ್ದು,ಇದರಿಂದಾಗಿ ಗಾಯಗೊಂಡಿದ್ದ ದಾಮೋದರ್ ಸಾಗರ್ ಜಿಲ್ಲೆಯ ಬುಂದೇಲ್ ಖಂಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದ ರಜಾಕ್ ಆಸ್ಪತ್ರೆಯ ಆವರಣಕ್ಕೆ ಬಂದಿದ್ದು, ಕೈಯಲ್ಲಿ ಲೈಟರ್ ಹಿಡಿದುಕೊಂಡು ಬಂದು ಅದನ್ನು ಹೊತ್ತಿಸುತ್ತಾ, ಆಸ್ಪತ್ರೆಯ ಆವರಣದಲ್ಲಿ ಸುತ್ತಾಡುತ್ತಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಇದಾದ ಬಳಿಕ ಆತ ನೇರವಾಗಿ ಕೋರಿ ಬಳಿಕೆ ಹೋಗಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಓಡಿದ್ದಾನೆ. ಬೆಂಕಿ ಹೊತ್ತಿ ಉರಿದ ಪರಿಣಾಮ ದಾಮೋದರ್ ಕೂಡ ಸ್ಥಳದಿಂದ ಓಡಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಇದೀಗ ಸುಟ್ಟ ಗಾಯಗಳೊಂದಿಗೆ ಕೋರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಗಳ ಪ್ರಕಾರ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಯ ಬೆನ್ನಲ್ಲೇ ಆರೋಪಿ ಮಿಲನ್ ರಜಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 307ರ ಪ್ರಕಾರ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.