ದಿಗ್ವಿಜಯ್, ಸಿದ್ದರಾಮಯ್ಯ, ಜಮೀರ್ ಪಾಕಿಸ್ತಾನದ ಪರ | ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ದಿಗ್ವಿಜಯ ಸಿಂಗ್, ಸಿದ್ದರಾಮಯ್ಯ, ಜಮೀರ್ ಅಹಮ್ಮದ್ ಪಾಕಿಸ್ತಾನದ ಪರವಾಗಿರುವ ವ್ಯಕ್ತಿಗಳು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರದಲ್ಲಿ ಮುಂಚೆ ಹೇಗಿತ್ತೋ ಹಾಗೇ ಮಾಡುತ್ತೇವೆ ಎಂದು ದಿಗ್ವಿಜಯ ಸಿಂಗ್ ಹೇಳುತ್ತಾರೆ. ಗೋವನ್ನೂ ಪೂಜಿಸುತ್ತೇವೆ, ವಯಸ್ಸಾದ ಗೋವನ್ನು ಹತ್ಯೆ ಮಾಡಿದರೆ ತಪ್ಪೇನು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಸಿದ್ದರಾಮಯ್ಯ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದು ಜಮೀರ್ ಅಹ್ಮದ್ ಹೇಳುತ್ತಾರೆ. ಈ ಮೂವರು ಪಾಕಿಸ್ತಾನ ಪರ ವ್ಯಕ್ತಿಗಳು. ಕಾಂಗ್ರೆಸ್ ಪಕ್ಷದಲ್ಲಿ ಯಾರು ಏನು ಬೇಕಾದರೂ ಹೇಳಿಕೆ ನೀಡಬಹುದು. ಹೇಳೋರು, ಕೇಳೋರು ಇಲ್ಲದ ಪಕ್ಷ ಎಂದು ಅವರು ಹೇಳಿದರು.
ಬಿಜೆಪಿ ಹೇಳೋರು, ಕೇಳೋರು ಇರುವ ಪಕ್ಷ. ಈಗಿನ ಬೆಳೆವಣಿಗೆ ಬಗ್ಗೆ ಕಾರ್ಯಕರ್ತರಲ್ಲಿ ಕೆಲ ಗೊಂದಲಗಳಿವೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಭೇಟಿಯ ಬಳಿಕ ಪಕ್ಷದ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಅವರು ಬಿಜೆಪಿಯೊಳಗಿನ ಆಂತರಿಕ ಕಲಹಕ್ಕೆ ನಯವಾಗಿ ಉತ್ತರಿಸಿದರು.
ಬಿಜೆಪಿಯಲ್ಲಿ ಸಹಿ ಸಂಗ್ರಹ ಪದ್ಧತಿ ಇಲ್ಲ. ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ ಅವರಿಗೆ ಸಹಿಸಂಗ್ರಹ ಮಾಡಬಾರದು. ನಾಯಕತ್ವ ಬದಲಾವಣೆಯ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ ಎಂದು ಬಿಜೆಪಿಯೊಳಗಿನ ರಾಜಕೀಯ ಅವ್ಯವಸ್ಥೆಯ ಬಗ್ಗೆ ಉತ್ತರಿಸಿದರು.
ಚುನಾವಣೆ ಸಮೀಪಿಸುತ್ತಿದ್ದಂತೆಯೇ , ಈವರೆಗೆ ಮರೆತು ಹೋಗಿದ್ದ ಗೋವು, ಪಾಕಿಸ್ತಾನವನ್ನು ಬಿಜೆಪಿಗರು ಮತ್ತೆ ಹೊರ ತೆಗೆದಿದ್ದಾರೆ. ಉತ್ತರಪ್ರದೇಶದಲ್ಲಿ ಈಗಾಗಲೇ ಇದು ಆರಂಭವಾಗಿದೆ. ಕರ್ನಾಟಕದಲ್ಲಿ ಇದೀಗ ಈಶ್ವರಪ್ಪನವರು ಮೊದಲ ಪ್ರದರ್ಶನ ನೀಡಿದ್ದಾರೆ ಎನ್ನುವ ಅಭಿಪ್ರಾಯಗಳು ಈ ಹೇಳಿಕೆಯ ಬೆನ್ನಲ್ಲೇ ಕೇಳಿ ಬಂದಿದೆ. ರಾಜ್ಯದಲ್ಲಿ ಗೋವುಗಳು ಕಾಲುಬಾಯಿ ರೋಗದಿಂದ ನರಳುತ್ತಿವೆ. ಆದರೆ, ಇದರ ಬಗ್ಗೆ ಯಾವುದೇ ಬಿಜೆಪಿ ಶಾಸಕರಾಗಲಿ, ಸಚಿವರಾಗಲಿ ಮಾತನಾಡುತ್ತಿಲ್ಲ. ರಾಜಕೀಯಕ್ಕಾಗಿ ಅಮಾಯಕ ಪ್ರಾಣಿಯನ್ನು ಬಳಸುವುದು ಇನ್ನಾದರೂ ನಿಲ್ಲಿಸಲಿ ಎಂದು ವಿರೋಧ ಪಕ್ಷಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ. ಕಾಲುಬಾಯಿ ರೋಗದ ಬಗ್ಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ರಾಜ್ಯ ಸರ್ಕಾರ ಒಂದು ಬಾರಿ ಹೇಳಿಕೆ ನೀಡಿದೆ. ಅದು ಬಿಟ್ಟರೆ, ಅದರ ನಿವಾರಣೆಗೆ ಮುಂದಾಗಿಲ್ಲ ಎನ್ನುವ ಆರೋಪಗಳು ಕೂಡ ಕೇಳಿ ಬಂದಿದೆ.