ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್, 6 ಜನರ ಜೀವನಕ್ಕೆ ಬೆಳಕಾಗಿದ್ದಾರೆ
ಬೆಂಗಳೂರು: ನಟ ಸಂಚಾರಿ ವಿಜಯ್ ಇನ್ನು ಮುಂದೆ ನೆನಪು ಮಾತ್ರ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಿಜಯ್, ತಮ್ಮ ಕೊನೆಯ ಕ್ಷಣದಲ್ಲಿ ಇನ್ನಷ್ಟು ಜೀವಗಳಿಗೆ ಆಸರೆಯಾಗಿ ಕಣ್ಣುಮುಚ್ಚಿದ್ದಾರೆ.
ನಿನ್ನೆ ರಾತ್ರಿಯೇ ವಿಜಯ್ ಅವರ ಲಿವರ್, ಕಿಡ್ನಿ, 2 ಕಣ್ಣು, ಹೃದಯದ ವಾಲ್ವ್ ಗಳನ್ನು ಸಂರಕ್ಷಿಸಿದಲಾಗಿದೆ. ಈ ಮೂಲಕ ವಿಜಯ್ ಅವರ ಅಂಗಾಂಗಗಳು 6 ಜನರ ಜೀವನಕ್ಕೆ ಬೆಳಕಾಗಿದೆ.
ನಿನ್ನೆ ರಾತ್ರಿ 3:30ರ ವೇಳೆಗೆ ಸಂಚಾರಿ ವಿಜಯ್ ನಿಧನರಾಗಿದ್ದಾರೆ. ಅವರ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸುವ ಮೊದಲು 2 ಬಾರಿ ಅಪ್ನಿಯಾ ಟೆಸ್ಟ್ ಮಾಡಿದ ಬಳಿಕ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಲಾಗಿದೆ. ಕುಟುಂಬಸ್ಥರ ಒಪ್ಪಿಗೆ ಪಡೆಯಲಾಗಿದೆ. ನಟ ವಿಜಯ್ ಅವರ ನಿಧನದಿಂದ ಅವರ ಕುಟುಂಬ ಕಂಗೆಟ್ಟು ಹೋಗಿದೆ.
ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದರೂ ಸಾಮಾನ್ಯವಾಗಿ ಬದುಕಿದ ಸಂಚಾರಿ ವಿಜಯ್, ಎಲ್ಲ ನಟರಿಗೆ ಸೆಲೆಬ್ರೆಟಿಗಳಿಗೆ ಮಾದರಿಯಾಗಿದ್ದಾರೆ. ಸಂಚಾರಿ ನಿಯಮವನ್ನು ಪಾಲಿಸಿದ್ದರೆ, ಅವರ ಪ್ರಾಣ ಉಳಿಯುತ್ತಿತ್ತೋ ಏನೋ ಎನ್ನುವ ಮರುಕವನ್ನು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ವ್ಯಕ್ತಪಡಿಸಿದ್ದಾರೆ.
ನಾಗತ್ತಿಹಳ್ಳಿ ಚಂದ್ರಶೇಖರ್ ಅವರು ಕೂಡ ಸಂಚಾರಿ ವಿಜಯ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಸಂಚಾರಿ ವಿಜಯ್ ಇನ್ನಿಲ್ಲ ಎಂದು ಹೇಳುವ ಸಂದರ್ಭದಲ್ಲಿ ನಮಗೇ ತುಂಬಾ ನೋವಾಗುತ್ತದೆ. ಇನ್ನು ಅವರ ಕುಟುಂಬಸ್ಥರ ಸ್ಥಿತಿಯೇನು? ಅವರಿಗೆ ದುಃಖ ತಡೆಯುವ ಶಕ್ತಿ ಸಿಗಲಿ ಎಂದು ಅವರು ಪ್ರಾರ್ಥಿಸಿದರು.
ಇನ್ನೂ ಇಂದು ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಸಂಚಾರಿ ವಿಜಯ್ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಟ ವಿಜಯ್ ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗಿದೆ.