ಸಿಎಂ ಆಗಲು ಹೊಲಿಸಿದ ಸೂಟ್, ಊರ ಜಾತ್ರೆಗೆ ಹಾಕಿಕೊಳ್ಳಿ | ಅತೃಪ್ತರಿಗೆ ರೇಣುಕಾಚಾರ್ಯ ತಿರುಗೇಟು! - Mahanayaka
6:11 AM Thursday 12 - December 2024

ಸಿಎಂ ಆಗಲು ಹೊಲಿಸಿದ ಸೂಟ್, ಊರ ಜಾತ್ರೆಗೆ ಹಾಕಿಕೊಳ್ಳಿ | ಅತೃಪ್ತರಿಗೆ ರೇಣುಕಾಚಾರ್ಯ ತಿರುಗೇಟು!

renukacharya
16/06/2021

ಬೆಂಗಳೂರು: ಕೆಲವರು ಸೂಟು ಹೊಲಿಸಿ ಸಿಎಂ ಕನಸು ಕಾಣುತ್ತಿದ್ದಾರೆ. ಸೂಟು ಬೂಟು ಅವರ ಕ್ಷೇತ್ರದ ಜಾತ್ರೆಯಲ್ಲಿ ಹಾಕಿಕೊಳ್ಳಲಿ ಎಂದು ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿ, ಸಿಎಂ ಕುರ್ಚಿ ಏರಲು ಯತ್ನಿಸುತ್ತಿರುವ ಬಿಜೆಪಿ ಶಾಸಕರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಇನ್ನೂ ಅತೃಪ್ತರ ಆಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೇಣುಕಾಚಾರ್ಯ, ಸಿಎಂ ಬಿ.ಎಸ್.ಯಡಿಯೂರಪ್ಪ ಪರ 65 ಶಾಸಕರ ಸಹಿ ಸಂಗ್ರಹ ಮಾಡಿರುವುದು ಸತ್ಯ. ಇದರಲ್ಲಿ ಯಾವುದೇ ಅನುಮಾನಗಳು ಬೇಡ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಗೆ ಸಮಯ ನೀಡಿದ್ದು, ಸಹಿ ಸಂಗ್ರಹವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಇಂದು ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ ನೀಡಲಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆಗೆ ತೆರೆ ಬೀಳಲಿದ್ದು, ಬಿಎಸ್ ವೈ ವಿರುದ್ಧ ತಂತ್ರಗಾರಿಕೆ ನಡೆಸುತ್ತಿರುವ ಕೆಲ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ ಎಂದು ಹೇಳಿದ್ದಾರೆ.

ಯಾರೋ ಮೂವರು ದೆಹಲಿಗೆ ಹೋಗಿ ಸುದ್ದಿ ವರಿಷ್ಠರ ಮನೆ ಗೇಟ್ ಮುಟ್ಟಿಬಂದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲ್ಲ. ಕೆಲವರು ಸೂಟು ಹೊಲಿಸಿ ಸಿಎಂ ಕನಸು ಕಾಣುತ್ತಿದ್ದಾರೆ. ಸೂಟು ಬೂಟು ಅವರ ಕ್ಷೇತ್ರದ ಜಾತ್ರೆಯಲ್ಲಿ ಹಾಕಿಕೊಳ್ಳಲಿ. ಧಾರವಾಡ, ವಿಜಯಪುರದ ಶಾಸಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯೊಳಗೆ ಇದೀಗ ಆಡಳಿತ ಪಕ್ಷ ವಿರೋಧ ಪಕ್ಷ ಎಂಬಂತ ಎರಡು ಬಣಗಳು ಸೃಷ್ಟಿಯಾದಂತಾಗಿದ್ದು,  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಸಂದರ್ಭದಲ್ಲಿ ಬಿಜೆಪಿ ಶಾಸಕರು, ಸಚಿವರು ದೂರುಗಳನ್ನು ಹಿಡಿದು ನಿಂತಿದ್ದಾರೆ. ಇತ್ತ ರೇಣುಕಾಚಾರ್ಯ ಅವರು 65 ಶಾಸಕರು ಯಡಿಯೂರಪ್ಪ ಪರವಾಗಿದ್ದಾರೆ ಎಂದು ಸಹಿ ಸಂಗ್ರಹ ಮಾಡಿದ್ದಾರೆ. 65 ಶಾಸಕರು ಸಿಎಂ ಪರವಾಗಿದ್ದರೆ ಎಂದರೆ, ಉಳಿದವರು ಸಿಎಂ ವಿರುದ್ಧ ಇದ್ದಾರೆ ಎನ್ನುವುದು ಕೂಡ ಸ್ಪಷ್ಟವಾಗುತ್ತಿದೆ.

ಇತ್ತೀಚಿನ ಸುದ್ದಿ