ಬ್ಯಾಂಕ್ ಗ್ರಾಹಕರೇ ಎಚ್ಚರ! | ಸ್ವಲ್ಪ ಯಾಮಾರಿದರೂ ನಿಮ್ಮ ಹಣ ಕಂಡವರ ಪಾಲಾಗಬಹುದು! - Mahanayaka
11:06 PM Wednesday 11 - December 2024

ಬ್ಯಾಂಕ್ ಗ್ರಾಹಕರೇ ಎಚ್ಚರ! | ಸ್ವಲ್ಪ ಯಾಮಾರಿದರೂ ನಿಮ್ಮ ಹಣ ಕಂಡವರ ಪಾಲಾಗಬಹುದು!

bank fraud
16/06/2021

ಮಂಗಳೂರು:  ಕೆವೈಸಿ ದಾಖಲೆ ನವೀಕರಣ  ಬಾಕಿ ಇದೆ. ಹಾಗಾಗಿ ನಿಮ್ಮ ಖಾತೆ ಬ್ಲಾಕ್ ಆಗಿದೆ ತಕ್ಷಣ ಸಂಬಂಧಿಸಿದ ದಾಖಲೆಗಳನ್ನು ನೀಡಿ ಅಪ್ ಡೇಟ್ ಮಾಡಿ ಎಂಬ ಸಂದೇಶವನ್ನು ನಂಬಿ ಬ್ಯಾಂಕ್ ಗ್ರಾಹಕರು ಮೋಸ ಹೋದ ಘಟನೆ ನಗರದಾದ್ಯಂತ ನಡೆದಿದೆ ಎಂದು ವರದಿಯಾಗಿದೆ.

ನಗರದ ಗ್ರಾಹಕರೊಬ್ಬರು  ಈ ಸಂದೇಶವನ್ನು ನಂಬಿ 63 ಸಾವಿರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಬಂದಿರುವ ಸಂದೇಶದಂತೆ ಕಂಡು ಬರುವ ಮೆಸೇಜ್ ವೊಂದು ಗ್ರಾಹಕರ ಮೊಬೈಲ್ ಗೆ ಬಂದಿದ್ದು, ಅಲ್ಲಿ ಲಿಂಕ್ ವೊಂದನ್ನು ನೀಡಲಾಗಿತ್ತು. ಲಿಂಕ್ ನ್ನು ಕ್ಲಿಕ್ ಮಾಡಿದಾಗ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ನಂತಹ ವೆಬ್ ಸೈಟ್ ವೊಂದು ತೆರೆದುಕೊಳ್ಳುತ್ತದೆ. ಅಲ್ಲಿ ಮಾಹಿತಿಗಳ ಭರ್ತಿ ಮಾಡಲು ಗ್ರಾಹಕರಿಗೆ ಸೂಚನೆ ನೀಡಲಾಗಿದ್ದು,  ಗ್ರಾಹಕರು ತಮ್ಮ ವಿವರಗಳನ್ನು ಕಳುಹಿಸಿದ ತಕ್ಷಣವೇ ಗ್ರಾಹಕರ ಮೊಬೈಲ್ ಗೆ ಒಟಿಪಿ ರವಾನೆಯಾಗುತ್ತದೆ. ತಕ್ಷಣವೇ ವಂಚಕರು ಗ್ರಾಹಕರಿಗೆ ಕರೆ ಮಾಡಿ, ನಿಮ್ಮ ಒಟಿಪಿ ನೀಡಿ ಎಂದು ಕೇಳುತ್ತಾರೆ. ಗ್ರಾಹಕರು ಒಟಿಪಿ ನೀಡಿದ ತಕ್ಷಣವೇ ಅವರು ಖಾತೆಯಲ್ಲಿದ್ದ ಹಣವನ್ನು ದೋಚುತ್ತಾರೆ.

ಈ ಸಂದೇಶ ಬಂದೊಡನೆ ಕೆಲವು ಗ್ರಾಹಕರು ಬ್ಯಾಂಕ್ ನ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ ಈ ವಂಚನೆ ಜಾಲ ಬಯಲಾಗಿದೆ. ಈ ಸಂದರ್ಭ ಬ್ಯಾಂಕ್ ಸಿಬ್ಬಂದಿ ತಕ್ಷಣವೇ  ನಿಮ್ಮ ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್ ಚೇಂಜ್ ಮಾಡಿ ಎನ್ನುವ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬ್ಯಾಂಕ್ ಗೆ ಸಂಬಂಧಿಸಿದಂತೆ ಯಾರೇ ಕರೆ ಮಾಡಿ ನಿಮ್ಮ ದಾಖಲೆಗಳನ್ನು ಕೇಳಿದ್ದಾರೆ ಎಂದಾದರೆ, ಅದೊಂದು ವಂಚನಾ ಜಾಲವಾಗಿರುತ್ತದೆ ಎನ್ನುವುದನ್ನು ಗ್ರಾಹಕರು ಮೊದಲು ತಿಳಿದುಕೊಳ್ಳಬೇಕು. ಈ ರೀತಿಯ ಯಾವುದೇ ಕರೆಗಳು ಬಂದರೆ ಗ್ರಾಹಕರು ಏಕಾಏಕಿ ನಿಮ್ಮ ವಿವರಗಳನ್ನು ಹಂಚಬೇಡಿ. ಹಾಗೆಯೇ ಬ್ಯಾಂಕ್ ಒಟಿಪಿಗಳನ್ನು ಯಾರಿಗೂ ಹಂಚಲು ಹೋಗಲೇ ಬೇಡಿ. ಯಾವುದೇ ದಾಖಲೆಗಳನ್ನು ಕೇಳಿದರೂ, ನಾನು ಬ್ಯಾಂಕ್ ಗೆ ಬಂದು ವಿವರಗಳನ್ನು ನೀಡುವುದಾಗಿ ತಿಳಿಸಿ ಮತ್ತು  ನಿಮ್ಮ ಸಮೀಪದ ಬ್ಯಾಂಕ್ ಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿ ಸ್ಪಷ್ಟಪಡಿಸಿಕೊಳ್ಳಿ. ಫೋನ್ ನಲ್ಲಿ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಹಂಚಿಕೊಳ್ಳುವುದು ಸುರಕ್ಷಿತವಲ್ಲ.

ಇತ್ತೀಚಿನ ಸುದ್ದಿ