ಮಹಿಳೆಯರೇ ಎಚ್ಚರ! | ಸಾಮಾಜಿಕ ಜಾಲತಾಣಗಳಲ್ಲಿ ಇಂತಹವರೂ ಇರುತ್ತಾರೆ ನೋಡಿ

ಹೆಣ್ಣಿಗೆ ಪ್ರಪಂಚದಲ್ಲಿ ಸುರಕ್ಷಿತ ಅನ್ನೋ ಸ್ಥಳ ಎಲ್ಲಿಯೂ ಇಲ್ಲ ಎನ್ನುವುದು ಬಹಳಷ್ಟು ಬಾರಿಗೆ ಸಾಬೀತಾಗಿದೆ. ಕೆಲಸ ಮಾಡುವ ಸ್ಥಳದಿಂದ ಹಿಡಿದು ತನ್ನ ಸ್ವಂತ ಮನೆಯಲ್ಲಿ ಕೂಡ ಹೆಣ್ಣು ಸುರಕ್ಷಿತವಲ್ಲ. ಮಹಿಳೆ ಎದುರಿಸುತ್ತಿರುವ ಸವಾಲುಗಳು ಮಹಿಳೆಯೇ ದಿಟ್ಟತನದಿಂದ ಎದುರಿಸಬೇಕಿದೆ. ಬಹಳಷ್ಟು ಮಹಿಳೆಯರು ಇಂದು ಇಂಟರ್ ನೆಟ್ ಬಳಕೆ ಮಾಡುತ್ತಿದ್ದಾರೆ. ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಇರುತ್ತಾರೆ. ಹಲವಾರು ಮಹಿಳೆಯರು ಸಾಮಾಜಿಕ ಜಾಲತಾಣಗಳಿಂದಾಗಿ ತಮ್ಮ ಕುಟುಂಬವನ್ನು ಬಂಧು ಮಿತ್ರರನ್ನೂ ಕಳೆದುಕೊಂಡದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ ಸಿಗುವ ಸ್ನೇಹಿತರು ಎಷ್ಟು ಒಳ್ಳೆಯವರು ಎನ್ನುವುದನ್ನು ಪರಾಮರ್ಶಿಸದೇ ಅಪರಿಚಿತರನ್ನು ಪರಿಚಯ ಮಾಡಿಕೊಳ್ಳುವುದು ಬಹಳ ಅಪಾಯಕಾರಿಯಾಗಿದೆ.
ಹೌದು! ನಾವು ಇಂದು ಆಧುನಿಕ ಕಾಲದಲ್ಲಿದ್ದೇವೆ. ನಮ್ಮ ಬೆರಳಿನ ತುದಿಯಲ್ಲಿಯೇ ಇಡೀ ಪ್ರಪಂಚವೇ ಇದೆ. ಆದರೆ, ಈ ಪ್ರಪಂಚದಲ್ಲಿ ಎಷ್ಟೋ ಕಶ್ಮಲಗಳಿವೆ. ಒಳ್ಳೆಯದು ಎಂದು ಮೇಲ್ನೋಟಕ್ಕೆ ಕಂಡರೂ ಅದರ ಬಗ್ಗೆ ವಾಸ್ತವ ತಿಳಿದಾಗ ನಮಗೆ ದುಪ್ಪಟ್ಟು ದುಃಖವಾಗುತ್ತದೆ. ಇದು ನಿಜ ಪ್ರಪಂಚವಾಗಿದೆ. ಈ ಸಾಮಾಜಿಕ ಜಾಲತಾಣಗಳು ಎಷ್ಟು ಒಳ್ಳೆಯದ್ದೋ ಅಷ್ಟೇ ಕೆಟ್ಟದ್ದೂ ಆಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಬಹಳಷ್ಟು ಎಚ್ಚರಿಕೆಯಿಂದಿರಬೇಕಿದೆ.
ಸಾಮಾಜಿಕ ಜಾಲತಾಣಗಳ ಪೈಕಿ ವಾಟ್ಸಾಪ್ ಅತ್ಯಂತ ಅಪಾಯಕಾರಿಯಾಗಿದೆ. ನಿಮ್ಮ ಸ್ನೇಹಿತರು, ಬಂಧು ಬಳಗ ಗ್ರೂಪ್ ಗಳನ್ನು ಕ್ರಿಯೇಟ್ ಮಾಡಿ, ಅದರ ಲಿಂಕ್ ಗಳನ್ನು ವಿವಿಧ ಗ್ರೂಪ್ ಗಳಲ್ಲಿ ಶೇರ್ ಮಾಡಿರುತ್ತಾರೆ. ಇತರ ಗ್ರೂಪ್ ಗಳಲ್ಲಿರುವ ಕೆಲವು ಕಿಡಿಗೇಡಿಗಳು, ಹೆಣ್ಣುಬಾಕರು, ಆ ಗ್ರೂಪ್ ನಲ್ಲಿರುವ ಪ್ರತಿಯೊಬ್ಬರ ನಂಬರ್ ಗಳನ್ನು ಗಮನಿಸುತ್ತಾರೆ. ಅಲ್ಲಿ ನಿಮ್ಮ ಡಿಪಿ, ಅಥವಾ ನಿಮ್ಮ ಅಕೌಂಟ್ ನೇಮ್ ನೀವು ವಾಟ್ಸಾಪ್ ನಲ್ಲಿ ನೀಡಿದ್ದರೆ, ನಿಮಗೆ ಮಿಸ್ ಕಾಲ್ ಕೊಡುತ್ತಾರೆ. ಹಾಯ್ ಎಂದು ಮೆಸೆಜ್ ಕಳಿಸುತ್ತಾರೆ. ನಿಮಗೆ ಈ ಗ್ರೂಪ್ ಗಳ ಬಗ್ಗೆ ಯಾವುದೂ ತಲೆಯಲ್ಲಿರುವುದಿಲ್ಲ. ಆ ಸಂದರ್ಭದಲ್ಲಿ ನಾನು ಇಂತಹ ಗ್ರೂಪ್ ನಲ್ಲಿ ಇದ್ದೇನೆ ಎಂದು ಆ ಗ್ರೂಪ್ ಗೆ ಸಂಬಂಧಪಟ್ಟ ಹಾಗೆ ನಿಮ್ಮನ್ನು ಮಾತಿಗೆಳೆಯುತ್ತಾರೆ. ಆ ಬಳಿಕ ಪ್ರತಿ ದಿನ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೆಜ್ ಗಳು ಆರಂಭವಾಗುತ್ತವೆ. ನೀವೂ ಸಾಮಾನ್ಯ ವಿಷಯ ಎಂಬಂತೆಯೇ ಅವರಿಗೆ ರಿಪ್ಲೈ ಮಾಡುತ್ತೀರಿ. ಆ ಬಳಿಕ ನಿಮ್ಮ ಜೊತೆ ಪ್ರತಿ ದಿನ ಏನಾದರೂ ಮಾತನಾಡಬೇಕು ಎಂದು ಪ್ರಯತ್ನಿಸುತ್ತಾರೆ. ನೀವು ಯಾವ ಸ್ಟೇಟಸ್ ಹಾಕಿದ್ದೀರೋ, ಆ ಸ್ಟೇಟಸ್ ಬಗ್ಗೆ ಮಾತನಾಡುತ್ತಾರೆ. ನೀವು ನೋವಿನ, ದುಃಖದ ಸ್ಟೇಟಸ್ ಹಾಕಿದ್ದರೆ, ಸಾಂತ್ವನ ಹೇಳಲು ಬರುತ್ತಾರೆ. ಹೀಗೆ ನಿಮಗೆ ಹತ್ತಿರವಾಗಿ ಬಿಡುತ್ತಾರೆ. ಮೊದಲು ಕಾಮಿಗಳು ಅವರ ಬಗ್ಗೆ ಇಲ್ಲದ ಕಥೆಯನ್ನು ಹೇಳಿ ನಿಮ್ಮನ್ನು ಭಾವನಾತ್ಮಕವಾಗಿ ಬಂಧಿಸುತ್ತಾರೆ. ಆ ಬಳಿಕ ನಿಮ್ಮ ಫೋಟೋ ಕೇಳುತ್ತಾರೆ ಹೀಗೆ ಹಂತ ಹಂತವಾಗಿ ನಿಮ್ಮನ್ನು ಅವರು ಸೋಲಿಸುತ್ತಲೇ ಹೋಗುತ್ತಾರೆ.
ಮದುವೆ ಆಗಿರುವ ಮಹಿಳೆಯರೇ ಇವರ ಮುಖ್ಯ ಟಾರ್ಗೆಟ್ ಆಗಿದ್ದಾರೆ. ಯಾಕೆಂದರೆ, ಮದುವೆಯಾದ ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಅವರಿಗೆ ಬಹಳ ಸುಲಭವಾಗಿರುತ್ತದೆ. ಮೊದಲು ನಿಮ್ಮಿಂದ ಫೋಟೋಗಳನ್ನು ಪಡೆದುಕೊಳ್ಳುವ ಅವರು ಬಳಿಕ ನಿಮ್ಮ ಬಳಿಕ ಹಾಸ್ಯಗಳನ್ನು ಮಾತನಾಡುತ್ತಾರೆ. ನಿಮಗೆ ಹೆಚ್ಚು ಪರಿಚಯ ಆಗಿರುವ ಕಾರಣ ನೀವೂ ಹಾಸ್ಯದಲ್ಲಿ ಮಾತನಾಡುತ್ತೀರಿ, ಅಲ್ಲಿಗೆ ನೀವು ಅವರ ಬಲೆಯೊಳಗೆ ಬಿದ್ದಿದ್ದೀರಿ ಎಂದೇ ಅರ್ಥ. ಅಂತಿಮವಾಗಿ ಅವರು, ನಿಮ್ಮ ಬಳಿಯಲ್ಲಿ ಅಶ್ಲೀಲ ಮಾತುಗಳನ್ನಾಡಲು ಆರಂಭಿಸುತ್ತಾರೆ. ಇದು ಎಲ್ಲಿ ಹೋಗಿ ಅಂತ್ಯವಾಗುತ್ತದೆ ಎನ್ನುವುದು ಹೇಳಲು ಅಸಾಧ್ಯ.
ಈ ಸಮಸ್ಯೆಯನ್ನು ಎದುರಿಸುವುದು ಹೇಗೆ?
ಸಾಮಾಜಿಕ ಜಾಲತಾಣಗಳಲ್ಲಿ ಇಂತಹವರು ಇರುವುದು ಸರ್ವೇ ಸಾಮಾನ್ಯ ಅದನ್ನು ನಾವು ತಡೆಯ ಬೇಕಾದರೆ, ನಾವು ಗಟ್ಟಿಯಾಗಿರಬೇಕು. ನಿಮಗೆ ಯಾರೇ ಆಗಲಿ ಅಪರಿಚಿತ ಮೆಸೆಜ್ ಗಳು ಬಂದರೆ ನೀವು ರಿಪ್ಲೈ ಮಾಡಲು ಹೋಗಬೇಡಿ. ನೀವು ರಿಪ್ಲೈ ಮಾಡದಿದ್ದರೆ, ನಿಮ್ಮ ಹಿಂದೆ ಇಂತಹವರು ಬೀಳುವುದು ಬಹಳ ಕಡಿಮೆ. ಹಾಗೆಯೂ ಮತ್ತೆ ಮತ್ತೆ ನಿಮಗೆ ಫೋನ್ ಕರೆಗಳು, ವಾಟ್ಸಾಪ್ ಕರೆಗಳು ಬಂದರೆ, ಜೋರು ಧ್ವನಿಯಲ್ಲಿ ಯಾರು ನೀನು? ಯಾಕೆ ಕಾಲ್ ಮಾಡ್ತಿದ್ದಿಯಾ? ಜೈಲಿಗೆ ಹೋಗೋ ಆಸೆ ಇದ್ಯ ಎಂದು ಜೋರು ಧ್ವನಿಯಲ್ಲಿ ಕೇಳಿ. ಇಂತಹವರು ಯಾವಾಗಲೂ ವೀಕ್ ಮೈಂಡ್ ಇರುವವರ ಜೀವನದ ಜೊತೆಗೆ ಮಾತ್ರವೇ ಆಟವಾಡುತ್ತಾರೆ. ನೀವು ಗಟ್ಟಿಯಾಗಿದ್ದೀರಿ ಎಂದಾದರೆ, ಯಾರೂ ನಿಮ್ಮ ತಂಟೆಗೆ ಬರುವುದಿಲ್ಲ. ಇದು ವಾಸ್ತವ. ಒಂದು ವೇಳೆ, ಈ ಮಿತಿಗಳನ್ನೂ ಮೀರಿ ನಿಮಗೆ ಸಮಸ್ಯೆಗಳನ್ನುಂಟು ಮಾಡಲು ಯತ್ನಿಸಿದರೆ, ಕಿಡಿಗೇಡಿಯ ನಂಬರ್ ಕರೆ ಕಾಲ್ ರೆಕಾರ್ಡ್ ಮೊದಲಾದ ದಾಖಲೆಗಳೊಂದಿಗೆ ಮಹಿಳಾ ಠಾಣೆಗಳಲ್ಲಿ ದೂರು ನೀಡಿ. ಆ ಬಳಿಕದ ವಿಚಾರಗಳನ್ನು ಪೊಲೀಸರು ಗಮನಿಸುತ್ತಾರೆ.