ಪ್ರೇಮಿಗಾಗಿ ಗಾಂಜಾ ಮಾರಾಟಕ್ಕಿಳಿದ ಪ್ರೇಯಸಿ ಈಗ ಪೊಲೀಸರ ಅತಿಥಿ! - Mahanayaka
1:27 PM Thursday 12 - December 2024

ಪ್ರೇಮಿಗಾಗಿ ಗಾಂಜಾ ಮಾರಾಟಕ್ಕಿಳಿದ ಪ್ರೇಯಸಿ ಈಗ ಪೊಲೀಸರ ಅತಿಥಿ!

renuka
16/06/2021

ಬೆಂಗಳೂರು:  ಗಾಂಜಾ ಮಾರಾಟದ ಆರೋಪದಲ್ಲಿ ಯುವತಿಯೋರ್ವಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಎಂಜಿನಿಯರ್ ಪದವೀಧರೆ ಗಾಂಜಾ ಮಾರಾಟದಲ್ಲಿ ತೊಡಗಿದ್ದು, ತನ್ನ ಪ್ರಿಯಕರನ ಪ್ರೀತಿಯನ್ನು ಉಳಿಸಲು ಈ ಕೃತ್ಯಕ್ಕೆ ಯುವತಿ ಕೈ ಹಾಕಿದ್ದಾಳೆ ಎಂದು ತಿಳಿದು ಬಂದಿದೆ.

ಆಂಧ್ರಪ್ರದೇಶ ಮೂಲದ ರೇಣುಕಾ ಬಂಧಿತ ಯುವತಿಯಾಗಿದ್ದು, ಈಕೆಯ ಪ್ರಿಯಕರ ಸಿದ್ಧಾರ್ಥ್ ನ ಆಣತಿಯ ಮೇರೆಗೆ ಯುವತಿ ಗಾಂಜಾ ಮಾರಾಟದಲ್ಲಿ ತೊಡಗಿದ್ದಳು ಎಂದು ತಿಳಿದು ಬಂದಿದೆ.

ಚೆನ್ನೈನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಆಂಧ್ರದ ಶ್ರೀಕಾಕುಳಂನ ರೇಣುಕಾ ಹಾಗೂ ಕಡಪ ಮೂಲದ ಸಿದ್ಧಾರ್ಥ್ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.  ಇವರ ಪ್ರೀತಿಗೆ ಪೋಷಕರ ವಿರೋಧ ಕೂಡ ಇತ್ತು. ಮನೆಯವರ ವಿರೋಧವನ್ನು ಕಟ್ಟಿಕೊಂಡ ರೇಣುಕಾ ತನ್ನ ಪ್ರೀತಿಗಾಗಿ ಚೆನ್ನೈನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.

ಓದಿನ ಬಳಿಕ ಕಡಪಗೆ ತೆರಳಿದ್ದ ಸಿದ್ಧಾರ್ಥ್ ಮೋಜು ಮಸ್ತಿಯ ಜೀವನವನ್ನು ಬಯಸಿದ್ದ. ಹೀಗಾಗಿ ಗಾಂಜಾ ಮಾರಾಟ ದಂಧೆಗೆ ಇಳಿದಿದ್ದ. ಈ ವಿಚಾರವನ್ನು ತನ್ನ ಪ್ರೇಯಸಿ ರೇಣುಕಾಗೂ ತಿಳಿಸಿದ್ದ.  ಹೊಸ ಬ್ಯುಸಿನೆಸ್ ಗೆ ನೀನೂ ಹೆಲ್ಪ್ ಮಾಡು ಇದರಿಂದ ಲಕ್ಷಾಂತರ ದುಡಿಯಬಹುದು ಎಂದು ಹೇಳಿದ್ದ. ಪ್ರಿಯಕರನ ಮಾತಿನಂತೆಯೇ ರೇಣುಕಾ ಖಾಸಗಿ ಕಂಪೆನಿಯ ಉದ್ಯೋಗ ತೊರೆದು ನಗರದ ಮಾರತ್ ಹಳ್ಳಿಯಲ್ಲಿ ರೂಮ್ ಮಾಡಿಕೊಂಡು ಮಾದಕ ವಸ್ತುಗಳ ಮಾರಾಟಕ್ಕೆ ಇಳಿದಿದ್ದಾಳೆ.

ವ್ಯವಹಾರ ಮುಂದುವರಿದಂತೆ ಡ್ರಗ್ಸ್ ವ್ಯವಹಾರದ ಸುಧಾಂಶುನನ್ನು ಸಿದ್ಧಾರ್ಥ್ ರೇಣುಕಾಗೆ ಪರಿಚಯ ಮಾಡಿಕೊಟ್ಟಿದ್ದ. ಅದರಂತೆ ಆತ ಆಂಧ್ರದಿಂದ ನಗರಕ್ಕೆ ಸಣ್ಣ ಪೊಟ್ಟಣಗಳನ್ನು ಕಳುಹಿಸುತ್ತಿದ್ದ ಎಂದ ಹೇಳಲಾಗಿದೆ.

ಇತ್ತ ಸದಾಶಿವನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ರೇಣುಕಾಳನ್ನು ಬಂಧಿಸಿದೆ.

ಒಡಿಶಾ ಹಾಗೂ ವಿಶಾಖಪಟ್ಟಣದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದ ಸಿದ್ಧಾರ್ಥ್ ಅದನ್ನು ರೇಣುಕಾಗೆ ಕಳುಹಿಸುತ್ತಿದ್ದ 50 ಗ್ರಾಂಗೆ 2 ರಿಂದ 30 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ವಿಚಾರಣೆಯ ವೇಳೆ ರೇಣುಕಾ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ