ಸಮುದ್ರಕ್ಕೆ ಉರುಳಿದ ಕಂಟೈನರ್: ಲಾರಿ ಚಾಲಕ ಸಾವು, ಕ್ಲೀನರ್ ನಾಪತ್ತೆ
ಮಂಗಳೂರು: ನವಮಂಗಳೂರು ಬಂದರ್ ನಲ್ಲಿ ಕಂಟೈನರೊಂದು ಸಮುದ್ರಕ್ಕೆ ಬಿದ್ದ ಪರಿಣಾಮ ಓರ್ವ ಲಾರಿ ಚಾಲಕ ಮೃತಪಟ್ಟು, ಮತ್ತೋರ್ವ ನಾಪತ್ತೆಯಾದ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಮೃತಪಟ್ಟವರು ಉತ್ತರ ಕರ್ನಾಟಕ ಮೂಲದವರು ಎಂದು ತಿಳಿದು ಬಂದಿದೆ.
ಡೆಲ್ಟಾ ಕಂಪೆನಿಯ 10 ಚಕ್ರದ ಕಂಟೈನರ್ ಕಬ್ಬಿಣದ ಅದಿರನ್ನು ಹಡಗಿನಿಂದ ಲೋಡ್ ಮಾಡಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ನಡೆದ ತಕ್ಷಣ ಈ ಸ್ಥಳದಲ್ಲಿದ್ದ ಟಗ್ ಬೋಟ್ ಪೈಲಟ್ ಘಟನೆ ಬಗ್ಗೆ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಕರ್ನಾಟಕ ಮೂಲದ 26 ವರ್ಷ ವಯಸ್ಸಿನ ರಾಜೇಸಾಬ ಮೃತಪಟ್ಟವರಾಗಿದ್ದು, 22 ವರ್ಷ ವಯಸ್ಸಿನ ಲಾರಿ ಕ್ಲೀನರ್ ಭೀಮಪ್ಪ ನಾಪತ್ತೆಯಾದವರಾಗಿದ್ದಾರೆ. ಘಟನೆ ನಡೆದಾಗ ರಾತ್ರಿ ಸುಮಾರು 11:30 ಗಂಟೆಯಾಗಿತ್ತೆನ್ನಲಾಗಿದೆ. ತಕ್ಷಣವೇ ರಕ್ಷಣಾ ಕಾರ್ಯನಡೆಸಲಾಗಿದೆ. ಲಾರಿ ಚಾಲಕನನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಲಾರಿ ಕ್ಲೀನರ್ ಗಾಗಿ ಶೋಧ ಕಾರ್ಯ ಮುಂದಿವರಿದಿದೆ.