ದಲಿತ ಬಾಲಕಿಗೆ ಮದ್ಯ ಕುಡಿಸಿ, ವಿವಸ್ತ್ರಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯ ಬಿಟ್ಟ ಪಾಪಿಗಳು!
ಪಶ್ಚಿಮ ಬಂಗಾಳ: ಮನೆ ಕೆಲಸ ಮಾಡುತ್ತಿದ್ದ ದಲಿತ ಬಾಲಕಿಯೋರ್ವಳನ್ನು ಜಾತಿಯ ಕಾರಣಕ್ಕಾಗಿ ದಂಪತಿಗಳು ಹಿಂಸಿಸಿ, ಅವಮಾನ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ದುಪ್ಗುರಿ ಎಂಬ ಹಳ್ಳಿಯೊಂದರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಗೆ ದಂಪತಿ ಬಲವಂತವಾಗಿ ಮದ್ಯ ಕುಡಿಸಿ, ಆಕೆಯನ್ನು ವಿವಸ್ತ್ರಗೊಳಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಈ ಬಗ್ಗೆ ಬಾಲಕಿ ನೀಡಿರುವ ದೂರಿನನ್ವಯ ಪೊಲೀಸರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಸದ್ಯ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಆಕೆಯ ಪತಿ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದಾನೆ. ಆರೋಪಿ ಮಹಿಳೆ ಪ್ರತಿಮಾ ಸರ್ಕಾರ್ ಗಡಾಂಗರ್ ಗ್ರಾಮ ಪಂಚಾಯತ್ ನ ಸದಸ್ಯೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.
ಆರೋಪಿಗಳಿಂದ ದೌರ್ಜನ್ಯಕ್ಕೊಳಗಾದ ಬಳಿಕ ಬಾಲಕಿಯು ಇಲ್ಲಿನ ಸಾಮಾಜಿಕ ಕಾರ್ಯಕರ್ತರಾಗಿರುವ ಅಬ್ದುಲ್ ಹಮೀದ್ ಎಂಬವರನ್ನು ಸಂಪರ್ಕಿಸಿ ದುಪ್ಗುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.