ಕೊರೊನಾ ಲಸಿಕೆ ಹಾಕಿಸಿಕೊಳ್ಳದ ನೌಕರರಿಗೆ ವೇತನ ಇಲ್ಲ: ಉಜ್ಜೈನ್ ಡಿಸಿ
23/06/2021
ಉಜ್ಜೈನ್: ಕೊರೊನಾ ಮೂರನೇ ಅಲೆಗೂ ಮೊದಲು ದೇಶಾದ್ಯಂತ ಲಸಿಕಾ ಅಭಿಯಾನವನ್ನು ವೇಗ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಜನರು ಲಸಿಕೆ ಕಡ್ಡಾಯವಾಗಿ ಪಡೆದುಕೊಳ್ಳಲು ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರ್ಕಾರಗಳು ಸುದ್ದಿಯಲ್ಲಿವೆ. ಇದೀಗ ಮಧ್ಯಪ್ರದೇಶದ ಉಜ್ಜೈನ್ ನ ಜಿಲ್ಲಾಡಳಿತ ಹೊರಡಿಸಿರುವ ಆದೇಶ ಚರ್ಚೆಯಲ್ಲಿದೆ.
ತನ್ನ ನೌಕರರನ್ನು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಉತ್ತೇಜಿಸಲು ವಿನೂತನ ಕ್ರಮವೊಂದನ್ನು ಇಲ್ಲಿನ ಜಿಲ್ಲಾಡಳಿತ ಕೈಗೊಂಡಿದೆ. ಉಜ್ಜೈನ್ ನಲ್ಲಿರುವ ರಾಜ್ಯ ಸರ್ಕಾರದ ನೌಕರರು ಲಸಿಕೆ ಹಾಕಿಸಿಕೊಂಡಲ್ಲಿ ಮಾತ್ರವೇ ಅವರಿಗೆ ಮಾಸಿಕ ವೇತನ ನೀಡಲಾಗುತ್ತದೆ ಎಂದು ಉಜ್ಜೈನ್ ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ.
ಜಿಲ್ಲಾಧಿಕಾರಿ ಆಶೀಶ್ ಸಿಂಗ್ ಈ ಆದೇಶ ಹೊರಡಿಸಿದ್ದು, ಜುಲೈ 31 ರ ಒಳಗೆ ಲಸಿಕೆ ಹಾಕಿಸಿಕೊಳ್ಳದೇ ಇದ್ದಲ್ಲಿ ಸರ್ಕಾರಿ ನೌಕರರಿಗೆ ವೇತನ ಬಿಡುಗಡೆ ಮಾಡುವುದಿಲ್ಲ, ಲಸಿಕೆ ಪ್ರಮಾಣಪತ್ರ ಸಲ್ಲಿಸುವ ನೌಕರರಿಗೆ ಮಾತ್ರವೇ ಜುಲೈ ತಿಂಗಳ ವೇತನವನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.