ಮಟನ್ ಕರಿಗಾಗಿ ಮದುವೆಯೇ ಮುರಿದು ಬಿತ್ತು | ಮರ್ಯಾದೆ ಬಿಟ್ಟು, ಕಚ್ಚೆ ಎತ್ತಿ ಕುಸ್ತಿಗೆ ನಿಂತ ವರ!
ಜೈಪುರ: ಮದುವೆ ಎಂದರೆ ಸಾಕು, ವರನ ಕಡೆಯವರು ಹೇಳಿದ್ದೇ ನಡೆಯಬೇಕು. ಅವರು ಹೇಳಿದ ಒಂದು ಮಾತಿಗೆ ಒಪ್ಪದಿದ್ದರೆ, ಮದುವೆ ಮುರಿಯುವುದು ಪಕ್ಕಾ. ಹೀಗಾಗಿ ಮದುವೆ ಸಂದರ್ಭದಲ್ಲಿ ವಧುವಿನ ಕಡೆಯವರು ವರನ ಕಡೆಯವರಿಗೆ ತಗ್ಗಿಬಗ್ಗಿ ನಡೆಯುವ ಸಂಪ್ರದಾಯವೋ, ಶೋಷಣೆಯೋ ಇನ್ನೂ ನಡೆಯುತ್ತಲೇ ಇದೆ. ಒಡಿಶಾದಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ಮಟನ್ ಕರಿ ಮಾಡಿಸಲಿಲ್ಲ ಎಂದು ವರನೋರ್ವ ಮದುವೆಯೇ ಮುರಿದಿದ್ದಾನೆ.
ಜೈಪುರದ ಸುಕಿಂದಾದ ನಿವಾಸಿ 27 ವರ್ಷ ವಯಸ್ಸಿನ ರಮಾಕಾಂತ್ ಪಾತ್ರಾ ಎಂಬಾತನಿಗೆ, ಬಾಂಧಾಗಾಂವ್ ನ ಯುವತಿಯ ಜೊತೆಗೆ ಮದುವೆ ನಿಶ್ಚಯವಾಗಿತ್ತು. ವಧುವನ್ನು ವರಿಸಲು ಗ್ರಾಮಕ್ಕೆ ಆಗಮಿಸಿದ ಗಂಡಿನ ಕಡೆಯವರು ಮೊದಲು ಊಟ ಮಾಡೋಣ ಎಂದು ಹೇಳಿದ್ದಾರೆ. ಈ ವೇಳೆ ಮಟನ್ ಕರಿ ಅವರು ಕೇಳಿದ್ದಾರೆ. ಮಟನ್ ಕರಿಯನ್ನು ವಧುವಿನ ಕಡೆಯವರು ಮಾಡಿಸಿರಲಿಲ್ಲ. ಈ ಕಾರಣಕ್ಕಾಗಿ ಭಾರೀ ಗಲಾಟೆಯೇ ನಡೆದು ಹೋಗಿದೆ. ವರ ರಮಾಕಾಂತ್ ನಾಚಿಕೆ, ಮಾನ, ಮರ್ಯಾದೆಯನ್ನೂ ಬಿಟ್ಟು ಮಟನ್ ಕರಿಗಾಗಿ ತನ್ನ ಸಂಬಂಧಿಕರ ಜೊತೆ ಸೇರಿ ವಧುವಿನ ಮನೆಯವರ ಜೊತೆಗೆ ಕಾದಾಡಿದ್ದು, ಕೊನೆಗೆ ನನಗೆ ಈ ಮದುವೆಯೇ ಬೇಡ ಎಂದು ತೆರಳಿದ್ದಾನೆ.
ಇದಾದ ಬಳಿಕ ಒಂದು ದಿನದ ಮಟ್ಟಿಗೆ ಇದೇ ಗ್ರಾಮದಲ್ಲಿ ಉಳಿದುಕೊಂಡ ವರನ ಕಡೆಯವರು, ಮರುದಿನ ಇದೇ ಗ್ರಾಮದ ಯಾವುದೋ ಹುಡುಗಿಗೆ ತಾಳಿ ಕಟ್ಟಿ ಮದುವೆಯಾಗಿ ತನ್ನ ಊರಿಗೆ ತೆರಳಿದ್ದಾರೆಂದು ತಿಳಿದು ಬಂದಿದೆ.