ಪುದುಚೇರಿಯಲ್ಲಿ 40 ವರ್ಷಗಳ ಬಳಿಕ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಮಹಿಳಾ ಸಚಿವೆ
28/06/2021
ಪುದುಚೇರಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮಹಿಳೆಯರು ಮಂತ್ರಿ ಸ್ಥಾನ ಪಡೆಯಬಾರದು ಎನ್ನುವ ಅಘೋಷಿತ ನಿಯಮ ಬರೋಬ್ಬರಿ 40 ವರ್ಷಗಳ ಬಳಿಕ ನಿರ್ಣಾಮಗೊಂಡಿದ್ದು, ಈ ಅಘೋಷಿತ ನಿಯಮವನ್ನು ಮುರಿದು ಚಂದಿರಾ ಪ್ರಿಯಾಂಗ್ ಅವರು, ಪುದುಚೇರಿಯ ಮಹಿಳಾ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಚಂದಿರಾ ಪ್ರಿಯಾಂಗ್ ಪುದುಚೇರಿಯ ಎಐಎನ್ ಆರ್ ಸಿ ಪಕ್ಷದ ಮೀಸಲಾತಿ ಅಭ್ಯರ್ಥಿಯಾಗಿದ್ದಾರೆ. ನೆಡುಂಗಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಇದೀಗ ಮಂತ್ರಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಂದ ಹಾಗೆ ಪ್ರಿಯಾಂಗ್ ಅವರ ತಂದೆ ಎಂ.ಚಂದಿರಕಸು ಅವರು 2011ರಲ್ಲಿ ಸಿಎಂ ರಂಗಾಸಾಮಿ ಅವರ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
ಇನ್ನೂ ತಮಗೆ ಮಂತ್ರಿ ಸ್ಥಾನ ದೊರಕಿರುವ ಹಿನ್ನೆಲೆಯಲ್ಲಿ ಮಾತನಾಡಿದ ಚಂದಿರಾ ಪ್ರಿಯಾಂಗ್, ಯುವಕರನ್ನು ವಿದ್ಯಾವಂತರನ್ನಾಗಿ ಮಾಡುವುದು, ಉದ್ಯೋಗಿಗಳನ್ನಾಗಿ ಮಾಡುವುದು ಮತ್ತು ಹೆಣ್ಣು-ಗಂಡು ಎಂಬ ಬೇಧವನ್ನು ತೊಲಗಿಸುವುದೇ ನನ್ನ ಗುರಿ. ಇದನ್ನು ನಾನು ಸಾಧಿಸುತ್ತೇನೆ ಎಂದು ತಿಳಿಸಿದ್ದಾರೆ.