ಅಂಬೇಡ್ಕರ್ ನಿಂದನೆ ವಿರುದ್ಧ ರೊಚ್ಚಿಗೆದ್ದ ಜನ |ಕೊನೆಗೂ ರಾಜೀನಾಮೆ ನೀಡಿದ ಗ್ರಾ.ಪಂ. ಸದಸ್ಯ
ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿಂದಿಸಿ ಮಾತನಾಡಿದ್ದಾರೆ ಎನ್ನಲಾಗಿರುವ ಗ್ರಾಮಪಂಚಾಯತ್ ಸದಸ್ಯರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಘಟನೆ ನಡೆದಿದೆ.
ತಾಲೂಕಿನ ಹರಳೆ ಗ್ರಾಮ ಪಂಚಾಯತ್ ಸದಸ್ಯ ಹೊಸ ಹಂಪಾಪುರ ಗ್ರಾಮದ ನಾಗರಾಜು ಅಲಿಯಸ್ ನಾಗಟ್ಟಿ ರಾಜೀನಾಮೆ ನೀಡಿದವರಾಗಿದ್ದಾರೆ. ಜೂನ್ 25ರಂದು ಗ್ರಾಮ ಪಂಚಾಯತ್ ವಿಚಾರವೊಂದರ ಬಗ್ಗೆ ಮಾತನಾಡುವ ವೇಳೆ ಅಂಬೇಡ್ಕರ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅವರು, ಏಕವಚನದಲ್ಲಿ ಮಾತನಾಡಿದ್ದರು ಎಂದು ಹೇಳಲಾಗಿದೆ.
ಈ ಹೇಳಿಕೆ ನೀಡಿದ ವಿಚಾರ ಹಳೆ ಹಂಪಾಪುರ ಗ್ರಾಮಸ್ಥರಿಗೆ ಈ ವಿಚಾರ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಗ್ರಾಮಸ್ಥರು ನಾಗರಾಜು ಅವರನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ ನಾಗರಾಜು ಪತ್ತೆಯಾಗಿರಲಿಲ್ಲ. ಈ ಬಗ್ಗೆ ದಲಿತ ಮುಖಂಡರು ಪಂಚಾಯತಿ ಮಾಡಲು ಸೇರಿದ್ದು, ಆದರೂ ನಾಗರಾಜ ಸಭೆಗೆ ಬರಲಿಲ್ಲ ಎಂದು ಹೇಳಲಾಗಿದೆ.
ಇಂತಹದ್ದೇ ಇನ್ನೊಂದು ಸಭೆ ಕರೆದಾಗ ನಾಗರಾಜು ಬಂದಿದ್ದು, ನಾನೇನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ. ಈ ವೇಳೆ, ನೀವು ಅಂಬೇಡ್ಕರ್ ಅವರನ್ನು ನಿಂದಿಸಿರುವುದು ನಮಗೆ ಗೊತ್ತಿದೆ. ಹಾಗಾಗಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಕ್ಕಾಗಿ ಪ್ರಾಯಶ್ಚಿತವಾಗಿ ಅವರನ್ನು ಗೌರವಿಸಬೇಕು ಎಂದು ಹೇಳಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಾಗರಾಜು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಗೌರವ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ತಮ್ಮ ರಾಜೀನಾಮೆ ಪತ್ರದಲ್ಲಿ, ನನಗೆ ವೈಯಕ್ತಿಕ ಕಾರ್ಯಗಳ ಮಧ್ಯೆ ಗ್ರಾಮ ಪಂಚಾಯತಿ ಸದಸ್ಯನಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಹಾಗೂ ನಾನು ಅವಿದ್ಯಾವಂತನಾಗಿದ್ದು, ಕಾನೂನುಗಳ ಅರಿವಿಲ್ಲದ ಕಾರಣ ಮತ್ತು ನಾನು ಕೂಲಿ ಕಾರ್ಮಿಕನಾಗಿದ್ದು, ಬೇರೆ ಗ್ರಾಮಗಳಿಗೆ ಹೋಗಿ ಕೂಲಿ ಮಾಡಿ ಸಂಸಾರ ನಿರ್ವಹಣೆ ಮಾಡಲು ಸಾಧ್ಯವಿಲ್ಲದ ಕಾರಣ ಹಾಗೂ ಸಾರ್ವಜನಿಕ ಕುಂದು ಕೊರತೆಗಳನ್ನು ಬಗೆ ಹರಿಸಲು ಸಾಧ್ಯವಾಗದ ಕಾರಣ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.