ಪತ್ನಿಯನ್ನು ಕೊಂದು ಕೊವಿಡ್ ನಿಂದ ಸತ್ತಿದ್ದಾಳೆ ಎಂದ ಪತಿ | ಸಿಸಿ ಕ್ಯಾಮರ ದೃಶ್ಯದಿಂದ ಬಯಲಾಯ್ತು ಸತ್ಯ! - Mahanayaka

ಪತ್ನಿಯನ್ನು ಕೊಂದು ಕೊವಿಡ್ ನಿಂದ ಸತ್ತಿದ್ದಾಳೆ ಎಂದ ಪತಿ | ಸಿಸಿ ಕ್ಯಾಮರ ದೃಶ್ಯದಿಂದ ಬಯಲಾಯ್ತು ಸತ್ಯ!

shrikanth
30/06/2021

ತಿರುಪತಿ: ಕೊವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬ ಖಿನ್ನತೆಗೊಳಗಾಗಿದ್ದು, ತಾನು ಪ್ರೀತಿಸಿ ವಿವಾಹವಾಗಿದ್ದ ಪತ್ನಿಯನ್ನು ಹತ್ಯೆಗೈದು ಕೊವಿಡ್ ನಿಂದ ಸತ್ತಿದ್ದಾಳೆ ಎಂದು ಸಂಬಂಧಿಕರನ್ನು ನಂಬಿಸಿದ ಘಟನೆ ನಡೆದಿದ್ದು, ಇದೀಗ ಆರೋಪಿಯ ಕೃತ್ಯ ಬಯಲಾಗಿದೆ.

ಜೂನ್ 23ರಂದು ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಭುವನೇಶ್ವರ್ ಮನೆಯಿಂದಲೇ ಕೆಲಸ ಮಾಡುತ್ತಿದ್ದಳು. ಇದೇ ಸಂದರ್ಭದಲ್ಲಿ ಪತಿ ಮರ್ಮರೆಡ್ಡಿ ಶ್ರೀಕಾಂತ್ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ಆತ ಖಿನ್ನತೆಗೊಳಗಾಗಿದ್ದನೆನ್ನಲಾಗಿದೆ. ಈ ನಡುವೆ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ಪತ್ನಿಯ ಜೊತೆಗೆ ನಿರಂತರವಾಗಿ ಜಗಳ ಆರಂಭಿಸಿದ್ದನೆನ್ನಲಾಗಿದೆ.

ಜೂನ್ 23ರಂದು ಇಬ್ಬರ ನಡುವೆ ಜಗಳ ನಡೆದು, ತಾರಕಕ್ಕೇರಿದ್ದು, ಈ ವೇಳೆ ಆಕ್ರೋಶದಲ್ಲಿ ತನ್ನ ಪತ್ನಿಯನ್ನು ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಸೂಟ್ ಕೇಸ್ ನಲ್ಲಿ  ಪತ್ನಿಯ ಮೃತದೇಹವನ್ನು ತುಂಬಿಸಿ, ತನ್ನ 18 ತಿಂಗಳ  ಮಗುವಿನೊಂದಿಗೆ  ಮನೆಯಿಂದ ತೆರಳಿದ್ದು,  ಸಮೀಪದ ಎಸ್ ವಿಆರ್ ಆರ್ ಸರ್ಕಾರಿ ಆಸ್ಪತ್ರೆಯ ಬಳಿಯಲ್ಲಿ ಪತ್ನಿಯ ಮೃತದೇಹವನ್ನು ಎಸೆದು, ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಅಲ್ಲಿಂದ ಆತ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಇನ್ನೂ ಭುವನೇಶ್ವರಿ ಯಾರ ಸಂಪರ್ಕಕ್ಕೂ ಸಿಗದಿರುವಾಗ ಅನುಮಾನಗೊಂಡ ಸಂಬಂಧಿಕರು ಶ್ರೀಕಾಂತ್ ನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪತ್ನಿ ಕೊರೊನಾದಿಂದ ಮೃತಪಟ್ಟಿದ್ದಾಳೆ. ವೈದ್ಯರೇ ಆಕೆಯ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಹೇಳಿದ್ದಾನೆ.

ಭುವನೇಶ್ವರಿ ಕುಟುಂಬದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿದ್ದು, ಅವರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು,  ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಸೂಟ್ ಕೇಸ್ ನೊಂದಿಗೆ  ಶ್ರೀಕಾಂತ್ ಹೋಗುತ್ತಿರುವುದು ಪತ್ತೆಯಾಗಿದೆ.

ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆಸ್ಪತ್ರೆ ಆವರಣದಲ್ಲಿ  ಮಹಿಳೆಯ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಕ್ಯಾಬ್ ಡ್ರೈವರ್ ಕೂಡ ಭಾಗಿಯಾಗಿದ್ದು, ಈತನನ್ನು ಬಂಧಿಸಿದ್ದಾರೆ. ಸದ್ಯ ಶ್ರೀಕಾಂತ್ ನನ್ನು ಬಂಧಿಸಲು ಪೊಲೀಸಲು ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ