ಭರ್ಜರಿ ವರದಕ್ಷಿಣೆ ನೀಡಿ ಅದ್ದೂರಿ ಮದುವೆ ಮಾಡಿದರೂ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾದಳು ಮಗಳು! - Mahanayaka
10:23 PM Thursday 19 - September 2024

ಭರ್ಜರಿ ವರದಕ್ಷಿಣೆ ನೀಡಿ ಅದ್ದೂರಿ ಮದುವೆ ಮಾಡಿದರೂ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾದಳು ಮಗಳು!

roopa jayaprakash
30/06/2021

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹನುಮನಹಳ್ಳಿ ಗ್ರಾಮದಲ್ಲಿ ನಡೆದ ಘಟನೆಯೊಂದು ಹೆಣ್ಣು ಹೆತ್ತವರ ಹೃದಯವನ್ನು ನಡುಗಿಸಿದೆ. ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಸಿಕೊಟ್ಟಿದ್ದರೂ, ಪತಿಯ ಮನೆಯಲ್ಲಿ ಬದುಕಲು ಸಾಧ್ಯವಾಗದೇ ಆಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡಿಸೆಂಬರ್ 10ರಂದು ದಾವಣಗೆರೆ ಜಿಲ್ಲೆಯ ಕುಂದವಾಡ ಗ್ರಾಮದ ನಿವಾಸಿ 25 ವರ್ಷ ವಯಸ್ಸಿನ ರೂಪಾ ಅವರಿಗೆ ದಾವಣಗೆರೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಯುವಕ ಜನಪ್ರಕಾಶ್ ಜೊತೆಗೆ ಅದ್ದೂರಿಯಾಗಿ ವಿವಾಹ ಮಾಡಿಸಲಾಗಿತ್ತು. ಈ ವೇಳೆ  10 ತೊಲೆ ಬಂಗಾರದ ಒಡವೆ, ಲಕ್ಷಾಂತರ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ಕುಟುಂಬಸ್ಥರು ನೀಡಿದ್ದರು. ಆದರೆ ಮದುವೆಯಾಗಿ 6 ತಿಂಗಳಿನಲ್ಲಿಯೇ ಪತಿಯ ಸ್ವಭಾವ ಕಂಡು ಪತ್ನಿ ರೋಸಿಹೋಗಿದ್ದಾಳೆ.

ಈ ನಡುವೆ ಮನೆಗೆ ಕರೆ ಮಾಡಿದ್ದ ರೂಪಾ,  ನನ್ನ ಪತಿಗೆ ನನ್ನ ಮೇಲೆ ಅನುಮಾನ, ಬೇರೊಬ್ಬನ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಿ ಎಂದು ಆರೋಪ ಮಾಡುತ್ತಿದ್ದಾರೆ. ಸಂಶಯಪಡುತ್ತಿದ್ದಾರೆ. ಆದರೆ ಇದಕ್ಕಾಗಿ ನಾನು ಸಾಯುವುದಿಲ್ಲ,  ಧೈರ್ಯವಾಗಿ ಎದುರಿಸಿ  ತೋರಿಸುತ್ತೇನೆ ಎಂದು ಹೇಳಿದ್ದಾಳೆ ಎಂದು ಹೇಳಿದ್ದಾಳೆ. ಮಗಳ ಮಾತಿನ ಬಳಿಕ ಈ ವಿಚಾರವನ್ನು ಸುಮ್ಮನೆ ಬಿಡಲಾಗದೇ ಪೋಷಕರು ಮಗಳ ಗಂಡನ ಮನೆಗೆ ಹೋಗಿ ನೋಡಿಕೊಂಡು ಬಂದಿದ್ದರು ಎಂದು ಹೇಳಲಾಗಿದೆ.


Provided by

ಪತಿ ಜಯಪ್ರಕಾಶ್, 2 ಎಕರೆಗೆ ಅಡಿಕೆ ನೆಡಬೇಕು, ಇನ್ನೂ 2 ಲಕ್ಷ ರೂಪಾಯಿ ಬೇಕು ಎಂದು ನನ್ನನ್ನು ಒತ್ತಾಯಿಸುತ್ತಿದ್ದಾನೆ. ಇದಲ್ಲದೇ ತವರಿಗೆ ಕರೆ ಮಾಡಬಾರದು ಎಂದು ಮೊಬೈಲ್ ಒಡೆದು ಹಾಕಿದ್ದಾನೆ ಎಂದು ರೂಪಾ ತನ್ನ ತಾಯಿಯ ಬಳಿಯಲ್ಲಿ ಹೇಳಿಕೊಂಡಿದ್ದಳು, ರೂಪಾ ಕುಟುಂಬಸ್ಥರು ಆರೋಪಿಸಿದ್ದಾರೆ.

ನನ್ನ ಮಗಳನ್ನು ಹೊಡೆದು ಕೊಂದು ಆತ್ಮಹತ್ಯೆಯ ಕಥೆಕಟ್ಟಲಾಗಿದೆ. ಮಗಳು ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಿದ್ದಾಳೆ ಎನ್ನುವುದೆಲ್ಲ ಕಟ್ಟುಕಥೆ ವರದಕ್ಷಿಣೆಗಾಗಿ ಈ ಕೊಲೆ ನಡೆದಿದೆ ಎಂದು ಮನೆಯವರು ಆರೋಪಿಸಿದ್ದಾರೆ.

ಘಟನೆ ಸಂಬಂಧ ತಹಶೀಲ್ದಾರ್ ಗಿರೀಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಯಕೊಂಡ ಪೊಲೀಸ್  ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ  ಪತಿ ಜಯಪ್ರಕಾಶ್ ಹಾಗೂ ಸಂಬಂಧಿಕರು ನಾಪತ್ತೆಯಾಗಿದ್ದು, ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಮಗಳಿಗೆ ಮದುವೆ ಮಾಡುವ ಮೊದಲು ಪೋಷಕರು ಅವನು ಯಾವ ಜಾತಿಯವನು, ಯಾವ ಕೆಲಸದಲ್ಲಿದ್ದಾನೆ ಎನ್ನುವುದನ್ನು ನೋಡುತ್ತಾರೆಯೇ ಹೊರತು, ಆತನ ಗುಣ ಎಂತಹದ್ದು ಎನ್ನುವುದನ್ನು ಬಹುತೇಕ ಬಾರಿ ನೋಡುವುದೇ ಇಲ್ಲ. ಮದುವೆಯ ಬಳಿಕ ತಮ್ಮ ಅಳಿಯ ಎಂತಹವನು ಎನ್ನುವುದು ಬಹುತೇಕ ಪೋಷಕರಿಗೆ ಗೊತ್ತಾಗುವುದು. ಮದುವೆಯ ಸಂದರ್ಭ ತಮ್ಮ ಪ್ರತಿಷ್ಠೆ ಎಂದು, ಮೀಸೆ ತಿರುವಿ ನೀಡಿದ ವರದಕ್ಷಿಣೆ ಮುಂದೆ ತಮ್ಮ ಮಗಳ ಕೊರಳಿಗೆ ಉರುಳಾಗಬಹುದು ಎನ್ನುವ ಕನಿಷ್ಠ ಪ್ರಜ್ಞೆಯೂ ಪೋಷಕರಿಗೆ ಇಲ್ಲದಿರುವುದು ದುರಂತ. ವರದಕ್ಷಿಣೆ ರಹಿತ ಸಮಾಜಕ್ಕಾಗಿ ಜನರು ಜಾಗೃತರಾಗಬೇಕಿದೆ.

ಇತ್ತೀಚಿನ ಸುದ್ದಿ