ನನ್ನ ಕೋಳಿಯನ್ನು ನೀವು ಪದಾರ್ಥ ಮಾಡಿ ತಿನ್ನಬಾರದು | ಈ ಬಾಲಕ ಹೇಗೆ ಹಠ ಹಿಡಿದಿದ್ದಾನೆ ನೋಡಿ
ಸಿಕ್ಕಿಂ: ಚಿಕ್ಕ ಮಕ್ಕಳ ಮನಸ್ಸು ಬಹಳ ಮೃಧುವಾದದ್ದು, ಸಣ್ಣ ವಯಸ್ಸಿನಲ್ಲಿಯೇ ಸಾಕು ಪ್ರಾಣಿಗಳ ಜೊತೆಗೆ ಅವರು ಹೆಚ್ಚು ಒಡನಾಟ ತೋರಿಸುತ್ತಾರೆ. ತಮ್ಮ ಸಾಕು ಪ್ರಾಣಿಗೆ ಏನಾದರೂ ನೋವು ಸಂಭವಿಸಿದರೆ, ಅವರು ಅದನ್ನು ಬಹಳಷ್ಟು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಇಲ್ಲೊಬ್ಬ ಬಾಲಕ ತನ್ನ ಕೋಳಿ ಮರಿಯನ್ನು ಕೊಂಡೊಯ್ಯದಂತೆ ಬೇಡಿಕೊಳ್ಳುವ ವಿಡಿಯೋವೊಂದು ವೈರಲ್ ಆಗಿದೆ.
ದಕ್ಷಿಣ ಸಿಕ್ಕಿಂನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಾಲಕನ ಪೋಷಕರು ನಡೆಸುತ್ತಿದ್ದ ಕೋಳಿ ಸಾಕಣಿಕೆ ಕೇಂದ್ರದಲ್ಲಿ ಕೋಳಿಯನ್ನು ಕೊಂಡೊಯ್ಯಲು ವಾಹನದೊಂದಿಗೆ ಕೆಲಸಗಾರರು ಬಂದಿದ್ದಾರೆ. ಈ ವೇಳೆ, ಬಾಲಕ ನೀವು ನನ್ನ ಕೋಳಿಗಳನ್ನು ಕೊಂಡೊಯ್ಯಬಾರದು ಎಂದು ಹೇಳಿದ್ದಾನೆ.
ಆದರೆ ಕೆಲಸಗಾರರು ಕೋಳಿಯನ್ನು ವಾಹನಕ್ಕೆ ಲೋಡ್ ಮಾಡುತ್ತಿದ್ದಂತೆಯೇ 6 ವರ್ಷ ವಯಸ್ಸಿನ ಬಾಲಕ ತೀವ್ರ ಹಠ ಹಿಡಿದಿದ್ದು, ಎದೆಗೆ ಕೈಯಿಂದ ಹೊಡೆದುಕೊಂಡು ಉರುಳಾಡಿ ಜೋರಾಗಿ ಅತ್ತಿದ್ದಾನೆ. ನೀವು ನನ್ನ ಕೋಳಿಗಳನ್ನು ಪದಾರ್ಥ ಮಾಡಿ ತಿನ್ನುತ್ತೀರಿ ಎಂದು ತೀವ್ರವಾಗಿ ಹಠ ಹಿಡಿದಿದ್ದಾನೆ. ಕೈಗಳನ್ನು ಮಡಚಿ ಮಂಡಿಯೂರಿ ನನ್ನ ಕೋಳಿಗಳನ್ನು ತಿನ್ನಬೇಡಿ ಎಂದು ಮನವಿ ಮಾಡಿದ್ದಾನೆ.
ಇನ್ನು ಬಾಲಕನ ಅಳುವನ್ನು ನಿಲ್ಲಿಸಲು ತಂದೆ ಮುಂದಾಗಿದ್ದು, ಅವರು ನನ್ನ ಸ್ನೇಹಿತರು, ಅವರು ಈ ಕೋಳಿಯನ್ನು ತಿನ್ನುವುದಿಲ್ಲ, ಅವರು ತಿನ್ನಲು ಬೇರೆ ಕೋಳಿಯನ್ನು ತೆಗೆದುಕೊಳ್ಳುತ್ತಾರೆ. ನಿನ್ನ ಕೋಳಿಯನ್ನು ತಿನ್ನುವುದಿಲ್ಲ ಎಂದು ಸಂತೈಸಿಸಿದ್ದಾರೆ. ಆ ಬಳಿಕ ಬಾಲಕ ಅಳುವುದನ್ನು ನಿಲ್ಲಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.