ಸೊಸೆಯನ್ನು ಚೈನ್ ನಲ್ಲಿ ಕಟ್ಟಿ ಹಾಕಿ ನಡು ರಸ್ತೆಯಲ್ಲಿ ಮಾವನಿಂದಲೇ ಹೀನ ಕೃತ್ಯ!

ಬಿಜ್ನೋರ್: ಸೊಸೆಯನ್ನು ಚೈನ್ ನಲ್ಲಿ ಬಂಧಿಸಿ ರಸ್ತೆಯುದ್ದಕ್ಕೂ ಮಾವ ಅಮಾನವೀಯವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.
64 ವರ್ಷ ವಯಸ್ಸಿನ ಮೃದೇಶ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಈತ ತನ್ನ ಸೊಸೆ 40 ವರ್ಷ ವಯಸ್ಸಿನ ಸರೋಜಾ ದೇವಿಯನ್ನು ಕಬ್ಬಿಣದ ಸಂಕೋಲೆಯಲ್ಲಿ ಬಂಧಿಸಿ ರಸ್ತೆಯುದ್ದಕ್ಕೂ ಅಮಾನವೀಯವಾಗಿ ಥಳಿಸಿದ್ದಾನೆ.
ಆಸ್ತಿ ವಿಚಾರಕ್ಕಾಗಿ ಮಾವ ತನ್ನ ಸೊಸೆಯನ್ನು ಹಿಂಸಿಸಿದ್ದಾನೆ ಎಂದು ಹೇಳಲಾಗಿದ್ದು, ಸರೋಜಾ ದೇವಿ ಅವರ ಪತಿ ಮೃತಪಟ್ಟಿದ್ದು, ಇದಾದ ಬಳಿಕ ಆಸ್ತಿ ವಿವಾದ ಉಂಟಾಗಿದೆ ಎಂದು ಹೇಳಲಾಗಿದೆ. ಆಸ್ತಿ ಸೊಸೆಯ ಕೈಗೆ ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಮಾವ ಮೃದೇಶ್ ಮೃಗೀಯವಾಗಿ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಆರೋಪಿ ಹಾಗೂ ಸಂತ್ರಸ್ತೆಯನ್ನು ಹುಡುಕಿ ಪತ್ತೆ ಹಚ್ಚಿದ್ದು, ಆರೋಪಿ ಮೃದೇಶ್ ಕುಮಾರ್ ನನ್ನು ಬಂಧಿಸಿದ್ದಾರೆ ಎಂದು ಬಿಜ್ನೋರ್ ವರಿಷ್ಠಾಧಿಕಾರಿ ಧರಮ್ ವೀರ್ ಸಿಂಗ್ ಹೇಳಿದ್ದಾರೆ.