ತಂಗಿಯ ಮೃತದೇಹವನ್ನು ತರುತ್ತಿದ್ದ ವೇಳೆ ಅಪಘಾತ; ಅಣ್ಣನೂ ಸಾವು
ಚಿತ್ರದುರ್ಗ: ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ತಂಗಿಯ ಮೃತದೇಹವನ್ನು ಬೆಂಗಳೂರಿನ ಆಸ್ಪತ್ರೆಯಿಂದ ಊರಿಗೆ ತರುತ್ತಿದ್ದ ಅಣ್ಣನೂ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಗುರುವಾರ ರಾತ್ರಿ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರಿನ 56 ವರ್ಷ ವಯಸ್ಸಿನ ರಾಮು ಮುದ್ದಿಗೌಡರ್ ಹಾಗೂ ಅವರ ಸಹೋದರಿ ರೇಣುಕಾ ಮೃತಪಟ್ಟವರಾಗಿದ್ದಾರೆ. ಮೂರು ದಿನಗಳ ಹಿಂದೆ ರೇಣುಕಾಗೆ ಅಪಘಾತವಾಗಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಅವರನ್ನು ಚಿಕಿತ್ಸೆಗಾಗಿ ಸಹೋದರ ರಾಮು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಸಹೋದರಿಯ ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಕಳುಹಿಸಿದ ರಾಮು ತಾನು ಕಾರು ಚಲಾಯಿಸುತ್ತಾ ಹಿರೇಕೆರೂರಿನತ್ತ ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ. ತಂಗಿಯನ್ನು ಕಳೆದುಕೊಂಡ ದುಃಖ ಹಸಿಯಾಗಿರುವಾಗಲೇ, ಅಣ್ಣ ಸಾವೂ ಸಂಭವಿಸಿದ್ದು, ಇದರಿಂದಾಗಿ ಇಡೀ ಕುಟುಂಬವೇ ತತ್ತರಿಸಿದೆ.