ತವರಿಗೆ ಓಡಿ ಹೋಗಿದ್ದ ಸೊಸೆ ವಾಪಸ್ ಬಂದಾಗ; ಮರಕ್ಕೆ ಕಟ್ಟಿಹಾಕಿ ಗಂಡನ ಕುಟುಂಬಸ್ಥರಿಂದ ಹೀನ ಕೃತ್ಯ
ಭೋಪಾಲ್: ಅತ್ತೆ ಮನೆಯಲ್ಲಿ ಹಿಂಸೆ ತಡೆಯಲಾರದೇ ತನ್ನ ತಂದೆಯ ಮನೆಗೆ ಹೋಗಿದ್ದ ಯುವತಿಯೋರ್ವಳನ್ನು ತಂದೆಯ ಮನೆಯವರು ಮತ್ತೆ ಅತ್ತೆಯ ಮನೆಗೆ ಕರೆದುಕೊಂಡು ಹೋಗಿದ್ದು, ತವರಿಗೆ ಸೊಸೆ ಹೋಗಿ ಬಂದಿದ್ದರಿಂದ, ಕೋಪಗೊಂಡ ಅತ್ತೆ ಮನೆಯವರು, ಆಕೆಯ ತಂದೆ ಹಾಗೂ ಸಹೋದರರ ಮುಂದೆಯೇ ಮರಕ್ಕೆ ಕಟ್ಟಿ ಹಾಕಿ ಕೂದಲು ಹಿಡಿದು ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದೆ.
ಮೂರು ತಿಂಗಳ ಹಿಂದೆಯಷ್ಟೇ 19 ವರ್ಷ ವಯಸ್ಸಿನ ಯುವತಿಗೆ ವಿವಾಹ ಮಾಡಿಸಲಾಗಿತ್ತು. ಆದರೆ ಅತ್ತೆ ಮನೆಯವರು ತೀವ್ರ ಕ್ರೂರಿಗಳಾಗಿದ್ದು, ಯುವತಿಯನ್ನು ಹಿಂಸಿಸುತ್ತಿದ್ದರು ಎಂದು ಹೇಳಲಾಗಿದೆ. ಇವರ ಹಿಂಸೆ ತಡೆಯಲು ಸಾಧ್ಯವಾಗದ ಯುವತಿ, ತನ್ನ ತಂದೆ ಹಾಗೂ ಸಹೋದರರ ಆಶ್ರಯ ಬಯಸಿ ತನ್ನ ತವರಿಗೆ ಬಂದಿದ್ದಾಳೆ. ತವರಿಗೆ ಬಂದ ಮಗಳನ್ನು, ಎಷ್ಟೇ ಕಷ್ಟಪಟ್ಟಾದರೂ ಗಂಡನ ಮನೆಯಲ್ಲಿ ನಿಲ್ಲಬೇಕು. ಗಂಡನ ಹಿಂಸೆಗಳನ್ನು ಸಹಿಸಬೇಕು. ಮದುವೆಯಾದ ಬಳಿಕ ಏನೇ ಕಷ್ಟ ಬಂದರೂ ಹೆಣ್ಣು ಗಂಡನ ಮನೆಯಲ್ಲಿರಬೇಕು ಎಂಬೆಲ್ಲ, ಬುದ್ಧಿವಾದಗಳನ್ನು ಹೇಳಿ ಗಂಡನಮನೆಗೆ ಕರೆದೊಯ್ದಿದ್ದಾರೆ.
ಗಂಡನ ಮನೆಗೆ ತಲುಪುತ್ತಿದ್ದಂತೆಯೇ, ಆಕೆಯ ಕುಟುಂಬಸ್ಥರು ಯುವತಿಯ ತಂದೆ ಹಾಗೂ ಸಹೋದರರ ಮುಂದೆಯೇ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಮರಕ್ಕೆ ಕಟ್ಟಿಹಾಕಿ, ಕೂದಲು ಹಿಡಿದು ಜಗ್ಗಿ ಚಿತ್ರ ಹಿಂಸೆ ನೀಡಿದ್ದಾರೆ. ಬುದ್ಧಿವಾದ ಹೇಳಿ ಕರೆದುಕೊಂಡಿದ್ದ ತಂದೆ, ಸಹೋದರರು ಸೇರಿದಂತೆ ಯಾರೂ ಕೂಡ ಆ ಅಮಾಯಕ ಯುವತಿಯ ನೆರವಿಗೆ ಧಾವಿಸಲಿಲ್ಲ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವತಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂ ದ 400 ಕಿಲೋಮೀಟರ್ ದೂರದಲ್ಲಿರುವ ಅಲಿರಾಜ್‌ಪುರದ ತನ್ನ ಮಾವನ ಮನೆಗೆ ಹೋಗಿದ್ದಳು. ಈ ವೇಳೆ ಆಕೆಯನ್ನು ಅಲ್ಲಿಂದ ಹೊರಗೆ ಎಳೆದು ಜೂನ್ 28 ರಂದು ಚಿತ್ರಹಿಂಸೆ ನೀಡಲಾಗಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ವಿಡಿಯೋ ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.