ದೇವರ ಎದುರು ಲಕ್ಷಾಂತರ ರೂ. ಇಟ್ಟು ಪೂಜಿಸಿದ ರೈತ: ರಾತ್ರೋ ರಾತ್ರಿ ಹಣ, ಗುಡಿಸಲು ಸುಟ್ಟು ಕರಕಲು!
ಗಾಡ್ವಾಲ: ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಲಾಭಗಳಿಸಿದ್ದ ರೈತನೋರ್ವ ದೇವರ ಎದುರು ಹಣ ಇಟ್ಟು ಪೂಜೆ ಮಾಡಿ ರಾತ್ರಿ ಮಲಗಿದ್ದು, ಆದರೆ ಅದೇ ರಾತ್ರಿ ಆತನ ಹಣ, ಮನೆ ಎಲ್ಲವೂ ಸುಟ್ಟು ಹೋಗಿರುವ ಘಟನೆ ನಡೆದಿದೆ.
ತೆಲಂಗಾಣದ ಜೊಗುಲಾಂಬ ಗಾಡ್ವಾಲ ಜಿಲ್ಲೆಯ ಕಾಟಿನ್ ದೊಡ್ಡಿ ಮಂಡಲದಲ್ಲಿ ಈ ಘಟನೆ ನಡೆದಿದ್ದು, ರೈತ ತೆಲಗು ವೀರೇಶ್ ಅವರು ಜುಲೈ 1ರಂದು ತಮ್ಮ ಹೊಲದಲ್ಲಿ ಬೆಳೆದಿದ್ದ ಭತ್ತವನ್ನು ಸರ್ಕಾರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರು. ಭತ್ತಕ್ಕೆ 1 ಲಕ್ಷ ರೂಪಾಯಿ ದೊರೆತಿದ್ದು, ವೀರೇಶ್ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿತ್ತು.
ಶನಿವಾರದಂದು ಬ್ಯಾಂಕ್ ಗೆ ತೆರಳಿದ ವೀರೇಶ್ ಅವರು 10 ಲಕ್ಷ ರೂಪಾಯಿ ಹಣ ಡ್ರಾ ಮಾಡಿದ್ದು, ಹಣವನ್ನು ಬಟ್ಟೆಯಿಂದ ಸುತ್ತಿ, ತನ್ನ ಮನೆ ದೇವರ ಮುಂದೆ ಇಟ್ಟು ದೇವರಿಗೆ ಪೂಜೆ ಸಲ್ಲಿಸಿ, ದೇವರಿಗೆ ದೀಪ ಹಚ್ಚಿ, ತನ್ನ ಪಾಡಿಗೆ ಸುಖನಿದ್ದೆ ಮಾಡಿದ್ದ.
ಆದರೆ, ರಾತ್ರಿ ವೇಳೆ ಬೆಕ್ಕೊಂದು ದೇವರ ದೀಪವನ್ನು ದೂಡಿ ಹಾಕಿದ್ದು, ಇದರಿಂದಾಗಿ ವೀರೇಶ್ ನ ಇಡೀ ಗುಡಿಸಲೇ ಸುಟ್ಟು ಹೋಗಿದೆ. ಇದರ ಜೊತೆಗೆ ವರ್ಷವಿಡೀ ಕಷ್ಟಪಟ್ಟು ದುಡಿದು ಸಂಪಾದಿಸಿದ ವೀರೇಶ್ ನ ಹಣ ಎಲ್ಲವೂ ಸುಟ್ಟು ಬೂದಿಯಾಗಿದೆ.
ದೇವರ ಮೇಲಿನ ನಂಬಿಕೆ, ವಿಶ್ವಾಸದಿಂದ ವೀರೇಶ್ ಹಣವನ್ನು ದೇವರ ಮುಂದೆ ಇಟ್ಟು ಹೋಗಿದ್ದ. ಆದರೆ, ವಾಸ್ತವವನ್ನು ರೈತ ಮರೆತಿದ್ದರಿಂದಾಗಿ ಇಷ್ಟೊಂದು ಪ್ರಮಾಣದ ಹಣ ಸುಟ್ಟು ಹೋಗಿದೆ. ದೇವರ ಮೇಲೆ ಎಷ್ಟೇ ನಂಬಿಕೆ ಇರಲಿ, ಆದರೆ ವಾಸ್ತವದ ಅರಿವು ಕೂಡ ಅಗತ್ಯ ಎನ್ನುವುದು ಇದೇ ಕಾರಣಕ್ಕಾಗಿ. ದೀಪ ಕೆಳಗೆ ಬಿದ್ದರೆ, ಇಡೀ ಹಣ ಗುಡಿಸಲು ಸುಟ್ಟುಹೋಗ ಬಹುದು ಎನ್ನುವ ಮುಂದಾಲೋಚನೆಯನ್ನು ರೈತ ಮಾಡಿದ್ದರೆ, ಇಷ್ಟೊಂದು ದೊಡ್ಡ ಸಂಕಷ್ಟಕ್ಕೆ ಆತ ಸಿಕ್ಕಿಕೊಳ್ಳುತ್ತಿರಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ.