ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ಸಚಿವ ಸದಾನಂದ ಗೌಡ ಸೇರಿದಂತೆ ಹಲವು ಸಚಿವರ ರಾಜೀನಾಮೆ! | ಯಾಕೆ? ಏನಾಯ್ತು?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ರಚನೆ ಅಥವಾ ವಿಸ್ತರಣೆ ಇಂದು ಸಂಜೆ 6 ಗಂಟೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅನೇಕ ಮುಖಂಡರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಹಾಲಿ ಸಚಿವರ ಮೌಲ್ಯಮಾಪನ ಮಾಡಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಚಿವರ ಪಟ್ಟಿ ತಯಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಇಂದು ಬೆಳಗ್ಗೆ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು, ಆದರೆ ಈ ಸಭೆ ರದ್ದಾಗಿದೆ. ಇದಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಪುನಾರ್ ರಚನೆ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಗಂಗ್ವಾರ್, ಶಿಕ್ಷಣ ಸಚಿವ ರಮೇಶ್ ಪೊಕ್ರಿಯಾಲ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ದಿಬೇಶ್ರೀ ಚೌಧರಿ ಸೇರಿದಂತೆ ಹಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿವಿ ಸದಾನಂದ ಗೌಡ ಅವರೂ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಥಾವರ್ ಚಂದ್ ಗೆಹ್ಲೋಟ್ ರನ್ನು ನಿನ್ನೆ ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಇಂದು ಅವರು ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಕಾರ್ಮಿಕ ಇಲಾಖೆಯ ಸ್ವತಂತ್ರ ಪ್ರಭಾರದ ಜವಾವ್ದಾರಿ ನಿರ್ವಹಿಸುತ್ತಿದ್ದ ಸಂತೋಷ್ ಗಂಗ್ವಾರ್ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಾವು ರಾಜೀನಾಮೆ ನೀಡಿರುವುದನ್ನು ಖಚಿತ ಪಡಿಸಿರುವ ಸಂತೋಷ್ ಅವರು ಮುಂದಿನ ದಿನಗಳಲ್ಲಿ ತಮಗೆ ಹೊಸದಾಗಿ ಯಾವ ಜಬಾಬ್ದಾರಿ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದ ದಿಬೇಶ್ರೀ ಚೌದರಿ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಜೆ ನಡೆಯುವ ಸಂಪುಟ ಪುನಾರ್ರಚನೆಯಲ್ಲಿ 35 ಕ್ಕೂ ಹೆಚ್ಚು ಮಂದಿ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.