ನಟ ದುನಿಯಾ ವಿಜಯ್ ಅವರ ತಾಯಿ ನಿಧನ | “ಅಮ್ಮ ಮತ್ತೆ ಹುಟ್ಟಿ ಬಾ” ಎಂದು ಭಾವುಕರಾದ ವಿಜಯ್
ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಅವರು ಕೆಲ ಕಾಲದ ಅನಾರೋಗ್ಯದ ಬಳಿಕ ಇಂದು ನಿಧನರಾಗಿದ್ದು, ಈ ಬಗ್ಗೆ ದುನಿಯಾ ವಿಜಯ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಬ್ರೈನ್ ಸ್ಟ್ರೋಕ್ ಹಿನ್ನೆಲೆಯಲ್ಲಿ ಕಳೆದ 20 ದಿನಳಿಂದ ಅವರು ಅನಾರೋಗ್ಯಕ್ಕೀಡಾಗಿದ್ದರು ಎಂದು ಹೇಳಲಾಗಿದೆ. ಅವರಿಗೆ ಮನೆಯಲ್ಲಿಯೇ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಕೊವಿಡ್ ನಿಂದ ದುನಿಯಾ ವಿಜಯ್ ಅವರ ತಾಯಿ ಚೇತರಿಸಿಕೊಂಡಿದ್ದರು. ಆದರೆ, ಇದರ ಬೆನ್ನಲ್ಲೇ ಮತ್ತೆ ಅವರಿಗೆ ಅನಾರೋಗ್ಯ ಕಾಡಿತ್ತು ಎಂದು ಹೇಳಲಾಗಿದೆ.
“ಅಮ್ಮನಿಗೆ ಆಸ್ಪತ್ರೆಗೆ ತೆರಳಲು ಇಷ್ಟವಿರಲಿಲ್ಲ, ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದೇನೆ” ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ದುನಿಯಾ ವಿಜಯ್ ಅವರ ಮನೆಗೆ ವೈದ್ಯರು ದಿನನಿತ್ಯ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ತಾಯಿಯ ಜೊತೆಗೆ ಅನ್ಯೋನ್ಯವಾಗಿದ್ದ ದುನಿಯಾ ವಿಜಯ್ ಅವರು ತಾಯಿಯ ನಿಧನದಿಂದ ತೀವ್ರವಾಗಿ ದುಃಖತಪ್ತರಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾಯಿಯ ಜೊತೆಗಿರುವ ಚಿತ್ರವನ್ನು ಹಂಚಿಕೊಂಡು “ ಅಮ್ಮ ಮತ್ತೆ ಹುಟ್ಟಿ ಬಾ” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ