ವಿಶ್ವನಾಥ್ ಭಟ್ ಎಂಬಾತನ ಮನೆಯಲ್ಲಿ ಜೀತಪದ್ಧತಿ!? | 10 ಮಕ್ಕಳ ರಕ್ಷಿಸಿದ ಅಧಿಕಾರಿಗಳು - Mahanayaka
1:07 AM Wednesday 11 - December 2024

ವಿಶ್ವನಾಥ್ ಭಟ್ ಎಂಬಾತನ ಮನೆಯಲ್ಲಿ ಜೀತಪದ್ಧತಿ!? | 10 ಮಕ್ಕಳ ರಕ್ಷಿಸಿದ ಅಧಿಕಾರಿಗಳು

jeetha padhati
10/07/2021

ದಕ್ಷಿಣಕನ್ನಡ:  ರಾಜ್ಯದ ವಿವಿಧ ಕಡೆಗಳಿಂದ ಮಕ್ಕಳನ್ನು ಕರೆತಂದು ಬಲವಂತವಾಗಿ ಜೀತಪದ್ಧತಿಗೆ ನೂಕಿದ ದೂರಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ  ಸುಳ್ಯ ತಾಲೂಕಿನ ಪಂಜ ಗ್ರಾಮದ ಕರಿಕಳ ಬಳಿಯ ವಿಶ್ವನಾಥ್ ಭಟ್ ಎಂಬಾತನ ಮನೆಗೆ ಜಿಲ್ಲಾಡಳಿತದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಅಪ್ರಾಪ್ತ ವಯಸ್ಸಿನ ಸುಮಾರು 10 ಮಕ್ಕಳನ್ನು ವಿಶ್ವನಾಥ್ ಭಟ್ ದಂಪತಿ ಕೆಲಸಕ್ಕೆ ಇಟ್ಟುಕೊಂಡಿದ್ದು, ಈ ಮಕ್ಕಳ ಜೊತೆಗೆ ಕೆಲವು ವಯಸ್ಕರನ್ನು ಕೂಡ ದುಡಿಸಿಕೊಳ್ಳುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದ್ದು, ಈ  ದೂರನ್ನು ಆಧರಿಸಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕಿ ಪಲ್ಲವಿ ಅಕುರಾತಿ ದಾಳಿಗೆ ಆದೇಶ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದ ವಿವಿಧ ಭಾಗಗಳಿಂದ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಹಾಗೂ ವಯಸ್ಕರನ್ನು ಕರೆದುಕೊಂಡು ಬಂದು, ಕೆಲಸ ಬಿಟ್ಟ ನಂತರ ಸಂಬಳ ಕೊಡುವುದಾಗಿ ಹೇಳಿ ದುಡಿಸಿಕೊಳ್ಳಲಾಗುತ್ತಿತ್ತು ಎನ್ನುವ ಆರೋಪ ಕೇಳಿ ಬಂದಿದೆ ಎನ್ನಲಾಗಿದೆ. ಮಕ್ಕಳನ್ನು ಹೇಗೆ ಕರೆದುಕೊಂಡು ಬರಲಾಗುತ್ತಿತ್ತು, ಬಲವಂತವಾಗಿ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿತ್ತೇ ಎನ್ನುವುದು ತಿಳಿದು ಬಂದಿಲ್ಲ.

ದಾಳಿ ವೇಳೆ ರಕ್ಷಿಸಲಾದ ಮಕ್ಕಳನ್ನು 48 ಗಂಟೆ ಒಳಗೆ ಆಪ್ತ ಸಮಾಲೋಚನೆಗೆ ಒಳಪಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಮಕ್ಕಳನ್ನು ಕರೆಸಿಕೊಂಡು ಜೀತಪದ್ಧತಿಯನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ಸ್ಥಳೀಯರು ದೂರು ನೀಡಿದ್ದರು ಎಂದು ಹೇಳಲಾಗಿದೆ. ಮಕ್ಕಳ ಜೊತೆಗೆ ಅಧಿಕಾರಿಗಳು ಸಮಾಲೋಚನೆ ನಡೆಸಿದ ಬಳಿಕ ಅಧಿಕೃತ ಮಾಹಿತಿಗಳು ಹೊರಬರಲಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ