ಮಹಿಳೆಯನ್ನು ಅಪಹರಿಸಿ ಲಾಡ್ಜ್ ನಲ್ಲಿ ಕ್ರೂರ ಲೈಂಗಿಕ ಹಿಂಸೆ ನೀಡಿದ ಗ್ಯಾಂಗ್ | ಬೆಚ್ಚಿಬೀಳಿಸಿದ ಘಟನೆ
ಕಣ್ಣೂರು: ಪತಿಯ ಜೊತೆಗೆ ಪಳನಿಗೆ ತೀರ್ಥಯಾತ್ರೆಗೆ ಹೋಗಿದ್ದ ಮಹಿಳೆಯೊಬ್ಬರನ್ನು ಗುಂಪೊಂದು ಅಪಹರಿಸಿ ಕ್ರೂರ ಲೈಂಗಿಕ ಹಿಂಸೆ ನೀಡಿದ ಘಟನೆ ನಡೆದಿದ್ದು, ಪತಿಯನ್ನು ಥಳಿಸಿ ಪತ್ನಿಯನ್ನು ಅಪಹರಿಸಲಾಗಿದೆ ಎಂದು ಕೇರಳ ನ್ಯೂಸ್ ವರದಿ ಮಾಡಿದೆ.
ಜೂನ್ 19ರಂದು ಈ ಘಟನೆ ನಡೆದಿದ್ದು, 20 ದಿನಗಳ ಬಳಿಕ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಪಾಲಕ್ಕಾಡ್ ನಿಂದ ರೈಲಿನ ಮೂಲಕ ಪಳನಿ ತಲುಪಿದ್ದ ದಂಪತಿ, ಸಂಜೆ ವೇಳೆ ಆಹಾರ ಖರೀದಿಸಲು ಹೊಟೇಲ್ ವೊಂದಕ್ಕೆ ಹೋದ ಬಳಿಕ, ಅವರನ್ನು ತಂಡವೊಂದು ಬಲವಂತವಾಗಿ ಲಾಡ್ಜ್ ವೊಂದಕ್ಕೆ ಕರೆದುಕೊಂಡು ಹೋಗಿದ್ದು, ಇದನ್ನು ತಡೆಯಲು ಯತ್ನಿಸಿದ ಪತಿಯನ್ನು ಲಾಡ್ಜ್ ಮಾಲಿಕರು ಹಾಗೂ ಗ್ಯಾಂಗ್ ಥಳಿಸಿದೆ ಎಂದು ಆರೋಪಿಸಲಾಗಿದೆ.
ಮಹಿಳೆಯನ್ನು ಒಂದು ರಾತ್ರಿ ಕೂಡಿ ಹಾಕಿ ತೀವ್ರವಾಗಿ ಗ್ಯಾಂಗ್ ಹಿಂಸಿದಿದ್ದು, ಮಹಿಳೆಯ ಖಾಸಗಿ ಭಾಗಕ್ಕೆ ಬಿಯರ್ ಬಾಟಲಿಯನ್ನು ನುಗ್ಗಿಸಿ ತೀವ್ರವಾಗಿ ಗಾಯಗೊಳಿಸಲಾಗಿದೆ ಎಂದು ಹೇಳಲಾಗಿದೆ. ಮರುದಿನ ಬೆಳಗ್ಗೆ ದಂಪತಿಯನ್ನು ಲಾಡ್ಜ್ ನಿಂದ ಬಿಡುಗಡೆ ಮಾಡಲಾಗಿದೆ. ಈ ವೇಳೆ ಅವರು ಪೊಲೀಸರಿಗೆ ದೂರು ನೀಡಲು ಹೋಗಿದ್ದು, ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ಬೆದರಿಸಿ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೂ ಈ ಎಲ್ಲ ಘಟನೆಗಳಿಂದ ಆಘಾತಗೊಂಡ ದಂಪತಿ ಕೇರಳಕ್ಕೆ ಮರಳಿದ್ದಾರೆ. ಯಾರ ಬಳಿಯೂ ಈ ವಿಚಾರವನ್ನು ತಿಳಿಸಿರಲಿಲ್ಲ. ಈ ನಡುವೆ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಅಸ್ವಸ್ಥಗೊಂಡಿದ್ದು, ಹೀಗಾಗಿ ಅವರನ್ನು ಪರಿಯಾರಂ ಸರ್ಕಾರಿ ಮಹಿಳಾ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇದರಿಂದಾಗಿ ಈ ಪ್ರಕರಣ ಬಯಲಿಗೆ ಬಂದಿದೆ ಎಂದು ವರದಿಯಾಗಿದೆ.