ವರ ಇಷ್ಟವಿಲ್ಲ ಎಂದಿದ್ದಕ್ಕೆ ತಂಗಿಯನ್ನು ಕೊಡಲಿಯಿಂದ ಕೊಚ್ಚಿಕೊಂದ ಅಣ್ಣ!
ರಾಯಚೂರು: ಮನೆಯವರು ನೋಡಿದ ವರ ತನಗೆ ಇಷ್ಟವಾಗಿಲ್ಲ ಎಂದು ಹೇಳಿದ ಯುವತಿಯನ್ನು ಸ್ವಂತ ಅಣ್ಣನೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ವಿಲಕ್ಷಣ ಘಟನೆಯೊಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
22 ವರ್ಷ ವಯಸ್ಸಿನ ಚಂದ್ರಕಲಾ ಹತ್ಯೆಗೀಡಾದ ಯುವತಿಯಾಗಿದ್ದು, ಈಕೆಯ ಅಣ್ಣ ಶ್ಯಾಮಸುಂದರ ತನ್ನ ತಂಗಿಯನ್ನೇ ಹತ್ಯೆ ಮಾಡಿದವನಾಗಿದ್ದಾನೆ. ಕೊಲೆಯಾದ ಚಂದ್ರಕಲಾಗೆ ಮಾನವಿ ತಾಲೂಕಿನ ಮದ್ಲಾಪುರ ಗ್ರಾಮದ ಯುವಕನೊಂದಿಗೆ ವಿವಾಹ ನಿಶ್ಚಯವಾಗಿದ್ದು, ಜು.23ರಂದು ಮದುವೆ ನಡೆಯಬೇಕಿತ್ತು. ಆದರೆ ವರ ತನಗೆ ಇಷ್ಟ ಇಲ್ಲ ಎಂದು ಚಂದ್ರಕಲಾ ಹೇಳಿದ್ದಾಳೆನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಅಣ್ಣ, ತಂಗಿ ಎಂದೂ ನೋಡದೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಮದುವೆ ನಿಶ್ಚಯವಾದ ಬಳಿಕ ಮನೆಯವರು ಮದುವೆಗೆ ಎಲ್ಲ ಸಿದ್ಧತೆ ನಡೆಸುತ್ತಿದ್ದರು. ಆದರೆ, ವರ ಕಪ್ಪಾಗಿದ್ದಾನೆ, ನೋದಲು ಚೆನ್ನಾಗಿಲ್ಲ ಎಂದು ಯುವತಿ ಮದುವೆಗೆ ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಅಣ್ಣ ಶ್ಯಾಮಸುಂದರ್ ಕೋಪವನ್ನು ಬುದ್ಧಿಯ ಕೈಗೆ ನೀಡಿದ್ದು, ಕೊಡಲಿಯಿಂದ ಕೊಚ್ಚಿ ತನ್ನ ತಂಗಿಯನ್ನೇ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ತನ್ನನ್ನು ಮದುವೆಯಾಗುವವನು ಹೀಗೆ ಇರಬೇಕು ಎನ್ನುವ ಕನಸು ಎಲ್ಲ ಹೆಣ್ಣು ಮಕ್ಕಳಲ್ಲಿಯೂ ಇರುತ್ತದೆ. ಆದರೆ, ಬಹುತೇಕ ಕುಟುಂಬಸ್ಥರು, ತಾವು ಅಂದು ಕೊಂಡಂತೆ ತಮ್ಮ ಹೆಣ್ಣು ಮಕ್ಕಳು ಬದುಕಬೇಕು ಎನ್ನುವ ಮನಸ್ಥಿತಿಯವರಾಗಿರುವುದರಿಂದಾಗಿ ತಮ್ಮ ಹೆಣ್ಣು ಮಕ್ಕಳು ಸ್ವಂತವಾಗಿ ಏನು ಮಾತನಾಡಿದರೂ, ಅದು ಘೋರ ತಪ್ಪು ಎಂದು ತಿಳಿದುಕೊಳ್ಳುವುದು ಸಾಮಾನ್ಯವಾಗಿದೆ. ಮನೆ, ಕುಟುಂಬದೊಳಗೆ ಎಂತಹ ಸಮಸ್ಯೆಗಳಿದ್ದರೂ, ನಾವೊಂದು ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸಬೇಕು ಎನ್ನುವ ವಾಸ್ತವ ಪ್ರತಿಯೊಬ್ಬರು ಅರಿಯಬೇಕಿದೆ.