ಕುಡಿದು ಅಡ್ಡಾದಿಡ್ಡಿ ಆಂಬುಲೆನ್ಸ್ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಚಾಲಕನಿಗೆ ಥಳಿತ
17/07/2021
ಗದಗ: ಆಂಬುಲೆನ್ಸ್ ಚಾಲಕನೋರ್ವ ಮದ್ಯ ಸೇವಿಸಿ ಅಡ್ಡಾದಿಡ್ಡಿ ಆಂಬುಲೆನ್ಸ್ ಚಲಾಯಿಸಿದ್ದು, ಈ ವೇಳೆ ಆಂಬುಲೆನ್ಸ್ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನ ಚಾಲಕನಿಗೆ ಗಂಭೀರ ಗಾಯವಾಗಿದೆ.
ನಗರದ ಮಲ್ಲಸಮುದ್ರ ಬಳಿಯಲ್ಲಿ ಈ ಘಟನೆ ನಡೆದಿದ್ದು, ಆಂಬುಲೆನ್ಸ್ ಚಾಲಕ ವಿಶ್ವನಾಥ್ ಬೋರಸೆಟ್ಟಿ ಎಂಬಾತ ಕುಡಿದು ಆಂಬುಲೆನ್ಸ್ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿ, ಥಳಿಸಿದ್ದಾರೆ.
ಕಾರಿನ ಡ್ರೈವರ್ ಗೋವಿಂದಪ್ಪ ಲಮಾಣಿ ಗಾಯಗೊಂಡವರಾಗಿದ್ದಾರೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆಯೇ ಹೈವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆಂಬುಲೆನ್ಸ್ ಚಾಲಕ ವಿಶ್ವನಾಥ್ ನನ್ನು ವಶಕ್ಕೆ ಪಡೆದಿದ್ದಾರೆ.
ಗಾಯಾಳು ಗೋವಿಂದಪ್ಪ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಈ ಸಂಬಂಧ ಹೈವೇ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.