ಭಾರೀ ಮಳೆಗೆ ರಾಜ್ಯಾದ್ಯಂತ ಭಾರೀ ಹಾನಿ | ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು - Mahanayaka
7:05 PM Friday 20 - September 2024

ಭಾರೀ ಮಳೆಗೆ ರಾಜ್ಯಾದ್ಯಂತ ಭಾರೀ ಹಾನಿ | ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

heavy rain
24/07/2021

ಬೆಂಗಳೂರು: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ಬದಿಯಲ್ಲಿ ವಾಸಿಸುತ್ತಿರುವವರು ಎಚ್ಚರವಾಗಿರಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನಿಷೇಧಿತ ಪ್ರದೇಶಗಳಲ್ಲಿ ಯಾರು ಕೂಡ ಸಂಚರಿಸಬಾರದು ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅಗನಾಶಿನಿ, ಕಾಳಿ ಹಾಗೂ ಗಂಗಾವಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಿಲ್ಲೆಯಲ್ಲಿರುವ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿರುವ ಸಣ್ಣಪುಟ್ಟ ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಜಿಲ್ಲೆಯ ಜನರೂ ಸಹ ಸಾಕಷ್ಟು ತೊಂದರೆಗಳಿಗೆ ಒಳಗಾಗಿದ್ದಾರೆ. ಜಲಾಶಯ ಹಾಗೂ ನದಿ ಭಾಗದಲ್ಲಿ ಪ್ರವಾಹಕ್ಕೆ ಸಿಲುಕಿದವರ ರಕ್ಷಣಾಕಾರ್ಯ ಪ್ರಗತಿಯಲ್ಲಿದೆ. ಜನರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


Provided by

ಜಿಲ್ಲೆಯ ಅಂಕೋಲಾ ತಾಲೂಕಿನ 32, ಹಳಿಯಾಳ 1, ಕಾರವಾರ 27, ಕುಮಟಾ 9, ಮುಂಡಗೋಡ 1, ಸಿದ್ದಾಪುರ 5 ಹಾಗೂ ಶಿರಸಿಯ 1 ಗ್ರಾಮ ಸೇರಿದಂತೆ ಒಟ್ಟಾರೆ 79 ಗ್ರಾಮಗಳು ನದಿ ಹಾಗೂ ಜಲಾಶಯದಿಂದ ಹೊರ ಬಿಡಲಾದ ನೀರಿನಿಂದ ಉಂಟಾಗಿರುವ ಪ್ರವಾಹಕ್ಕೆ ಸಿಲುಕಿವೆ. ಜಿಲ್ಲೆಯಲ್ಲಿ ಒಟ್ಟು 11084 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೊನ್ನಾವರ ತಾಲೂಕಿನಲ್ಲಿ ಮೀನುಗಾರ ಮಹಿಳೆಯೊಬ್ಬರು ಹಾಗೂ ಶಿರಸಿ ತಾಲೂಕಿನಲ್ಲಿಒಬ್ಬ ವ್ಯಕ್ತಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ನದಿಯ ಪ್ರವಾಹ ಸಿಲುಕಿ ಮೃತರಾಗಿದ್ದು, ಅವರ ಮೃತದೇಹ ಪತ್ತೆಯಾಗಿವೆ. ಅಂಕೋಲಾ ತಾಲೂಕಿನಲ್ಲಿಇಬ್ಬರು ಕಾಣೆಯಾಗಿದ್ದು, ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಮಳೆ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ 1, ಕಾರವಾರ 5 ಹಾಗೂ ಯಲ್ಲಾಪುರ 3 ಸೇರಿದಂತೆ ಒಟ್ಟು 9 ಮನೆಗಳು ಪೂರ್ಣ ಹಾಗೂ 55 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟಾರೆಯಾಗಿ ಮಳೆ ಹಾಗೂ ಪ್ರವಾಹದಲ್ಲಿ ಸಿಲುಕಿದಂತಹ ಒಟ್ಟು 3776 ಜನರನ್ನುರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮನೆ ಕುಸಿತ:

ಭಾರೀ ಮಳೆಗೆ ಚಿಕ್ಕಮಗಳೂರು ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಬಾಳೆಹಳ್ಳಿಯ ಜಯರಾಂ ಎಂಬುವರ ಮನೆ ಕುಸಿದಿದ್ದು, ಜಯರಾಂ, ಪತ್ನಿ, ಮಗ ಮನೆಯಿಂದ ಹೊರಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ಊರುಬಗೆ-ಯು ಹೊಸಹಳ್ಳಿ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಭಾರಿ ಮಳೆಯಿಂದ ನಾಟಿ ಮಾಡಿದ ಗದ್ದೆಗಳು ಜಲಾವೃತವಾಗಿದೆ. ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದು, ಸತತ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಹೂವಿನಹೆಡಗಿ ಸೇತುವೆ ಮುಳುಗಡೆ

ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ 3.5 ಲಕ್ಷ ಕ್ಯುಸೆಕ್ ಅಡಿ ನೀರು ಹೊರಬಿಡುತ್ತಿದ್ದು, ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಶನಿವಾರ ಮುಳುಗಡೆಯಾಗಿದೆ. ಮುನ್ನೆಚ್ಚರಿಕೆ ವಹಿಸಿ ನಿನ್ನೆ ರಾತ್ರಿಯಿಂದಲೇ‌ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಕಲಬುರ್ಗಿ- ರಾಯಚೂರು ಮಧ್ಯೆ ಸರ್ಕಾರಿ ಬಸ್ ಗಳು ಸಂಚರಿಸುವ ಪ್ರಮುಖ ಮಾರ್ಗ ಇದಾಗಿತ್ತು. ಇದೀಗ 40 ಕಿಲೋ ಮೀಟರ್ ಸುತ್ತುವರಿದು ತಿಂಥಣಿ ಬ್ರಿಡ್ಜ್ ಮೂಲಕ ಕಲಬುರ್ಗಿಯಿಂದ ರಾಯಚೂರಿಗೆ ಸಂಚರಿಸಬೇಕಿದೆ. ಖಾಸಗಿ ವಾಹನಗಳು ಕಲಬುರ್ಗಿಯಿಂದ ಯಾದಗಿರಿ, ಶಕ್ತಿನಗರ ಮೂಲಕ ರಾಯಚೂರು ತಲುಪಲು ಅನುಕೂಲವಿದೆ. ಆದರೆ, ಸರ್ಕಾರಿ ಬಸ್ ಗಳು ಈ ಮಾರ್ಗದಲ್ಲಿ ಹೆಚ್ಚವರಿ ಸಂಚರಿಸಲು ತೆಲಂಗಾಣ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಶಕ್ತಿನಗರ ಪಕ್ಕದ ದೇವುಸುಗೂರು ಸೇತುವೆ ಎರಡು ರಾಜ್ಯಗಳ ಗಡಿಭಾಗದಲ್ಲಿದೆ.

ಹಳೆ ಶಿವಮೊಗ್ಗಕ್ಕೆ ನುಗ್ಗಿತು ನೀರು

ಹಳೆ ಶಿವಮೊಗ್ಗ ಭಾಗ ಮತ್ತೆ ಜಲಾವೃತವಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿಯಿಂದ ನೀರು ಬಡಾವಣೆಗಳಿಗೆ ನುಗ್ಗಿದೆ. ರಸ್ತೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ. ಎಲ್ಲೆಡೆ ನದಿಗಳು ಅಪಾಯ ಮಟ್ಟ ಮೀರಿ ಹರಿಯಲಾರಂಭಿಸಿವೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1800 ಅಡಿ ದಾಟಿದ್ದು, ಸಾಗರ ತಾಲೂಕಿನಲ್ಲಿ ಪ್ರವಾಹ ಭೀತಿ ಜಾಸ್ತಿಯಾಗುತ್ತಲೇ ಇದೆ. ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ಸುದ್ದಿ